ಬೆಂಗಳೂರು: ಕೋವಿಡ್ ಕಂಟ್ರೋಲ್ ವಿಚಾರವಾಗಿ ರಾಜ್ಯದ ಕಾರಾಗೃಹಗಳಿಗೆ ಬೆಂಗಳೂರು ಸೆಂಟ್ರಲ್ ಜೈಲು ಮಾದರಿಯಾಗಿದೆ. ಇಡೀ ರಾಜ್ಯದ ಜೈಲುಗಳ ಪೈಕಿ ಮೊದಲು ಕೊರೊನಾ ಪಾಸಿಟಿವ್ ಬಂದಿದ್ದ ಜೈಲು ಈಗ ಕೊರೊನಾ ಮುಕ್ತವಾಗಿದೆ. 100ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳಿದ್ದ ಸೆಂಟ್ರಲ್ ಜೈಲಿನಲ್ಲಿ ಕೊರೊನಾ ಬರದಂತೆ ಜೈಲು ಅಧಿಕಾರಿಗಳು ರೂಪಿಸಿದ ದಶಸೂತ್ರದಿಂದ ಸೋಂಕು ಸಂಪೂರ್ಣ ನಿಯಂತ್ರಣಗೊಂಡಿದೆ.
ರಾಜ್ಯದ ಕಾರಾಗೃಹಗಳಿಗೆ ಮಾದರಿಯಾದ ಪರಪ್ಪನ ಅಗ್ರಹಾರ:
ಕಳೆದ ಕೆಲ ದಿನಗಳ ಹಿಂದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಿತ್ಯ 10ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಬರುತಿತ್ತು. ವಿಚಾರಣಾಧೀನ ಕೈದಿಗಳಿಂದಲೇ ಹೆಚ್ಚು ಸೋಂಕು ಕಾಣಿಸಿಕೊಂಡಿತ್ತು. ಈ ನಡುವೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ಜೈಲಿಗೆ ಭೇಟಿ ಕೊಟ್ಟು, ಸೋಂಕು ಕಡಿವಾಣಕ್ಕೆ ಸೂಚನೆ ಕೊಟ್ಟಿದ್ದರು.
ಇದರ ಬೆನ್ನಲ್ಲೇ ಕೇವಲ 20 ದಿನದಲ್ಲಿ ಕೊರೊನಾ ಪ್ರಕರಣವನ್ನು ನಿಯಂತ್ರಣಕ್ಕೆ ತರಲಾಗಿದೆ. ಕಳೆದ ಒಂದು ವಾರದಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ. ಈ ಮೂಲಕ ಪರಪ್ಪನ ಅಗ್ರಹಾರ ಕಾರಾಗೃಹ ಇತರ ಕಾರಾಗೃಹಗಳಿಗೆ ಮಾದರಿಯಾಗಿದೆ.
ಕೊರೊನಾ ಮುಕ್ತಕ್ಕೆ ದಶಸೂತ್ರವೇ ಕಾರಣ:
ಜೈಲಧಿಕಾರಿಗಳ ದಶಸೂತ್ರವೇ ಕೊರೊನಾ ಮುಕ್ತವಾಗಲು ಕಾರಣವಾಗಿದೆ.
- ಯಾರೇ ವಿಚಾರಣಾಧೀನ ಕೈದಿ ಬಂದರೂ 14 ದಿನಗಳ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ.
- ಕ್ವಾರಂಟೈನ್ನಲ್ಲಿರುವ ಪ್ರತಿ ಕೈದಿಗೆ ದಿನಕ್ಕೆ ಎರಡು ಬಾರಿ ಕಷಾಯ ಸಹ ನೀಡಲಾಗುತ್ತಿದೆ.
- ಎಲ್ಲ ಕೈದಿಗಳಿಗೆ ನಿತ್ಯ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಕೊಡಲಾಗುತ್ತಿದೆ.
- ಜೈಲಿನ ಯಾರೇ ಸಿಬ್ಬಂದಿ ಮೂರು ದಿನ ರಜೆ ಹೋದರೂ ಸಹ ಕಡ್ಡಾಯ ನೆಗೆಟಿವ್ ರಿಪೋರ್ಟ್ ತರಬೇಕು.
- ಬ್ಯಾರಕ್ಗಳಲ್ಲಿ ಐದು ಮಂದಿ ಕೈದಿಗಳು ಮಾತ್ರ ಇರಲು ಸೂಚನೆ ನೀಡಲಾಗಿದೆ.
- ಯಾವುದೇ ಕೈದಿಗೆ ನೆಗಡಿ, ಕೆಮ್ಮು, ಜ್ವರ ಏನೇ ಇದ್ದರೂ ಅವರನ್ನು ಪ್ರತ್ಯೇಕ ಮಾಡಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ.
- ಒಳಗೆ ಪ್ರತಿನಿತ್ಯ ಸ್ಯಾನಿಟೈಸ್ ಮಾಡಲಾಗುತ್ತಿದೆ, ಪ್ರತಿಯೊಬ್ಬರಿಗೂ (ಕೈದಿ) ಮಾಸ್ಕ್ ಕಡ್ಡಾಯ ಮಾಡಲಾಗಿದೆ.
- ಜೈಲಿನ ಶುಚಿತ್ವ ಹಾಗೂ ಸ್ಯಾನಿಟೈಸ್, ಮಾಸ್ಕ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
- ಪೊಲೀಸರು ಯಾವುದೇ ಆರೋಪಿಯನ್ನು ಕರೆತಂದರೂ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಲಾಗಿದೆ.
- ಕೈದಿಗಳ ಭೇಟಿಗೆ ಯಾರೇ ಬಂದರೂ ಹೊರಗಿನ ವ್ಯಕ್ತಿಗಳಿಗೆ ಅವಕಾಶವಿಲ್ಲ ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಡುಮೊಲ ಎಂದು ಭಾವಿಸಿ ಸ್ನೇಹಿತನಿಗೆ ಗುಂಡು ಹಾರಿಸಿದ ಕಾರ್ಮಿಕ : ಚಿಕಿತ್ಸೆ ಫಲಿಸದೇ ಸಾವು
ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಒಟ್ಟು 4,643 ಕೈದಿಗಳಿದ್ದಾರೆ. ಕೋವಿಡ್-19 ಹೆಚ್ಚಾದ ಹಿನ್ನೆಲೆ ಸುಪ್ರೀಂಕೋರ್ಟ್ ಆದೇಶದಂತೆ 92 ಮಂದಿಗೆ ಪೆರೋಲ್ ಕೊಟ್ಟಿದ್ದು, ಈ ಮೂಲಕ ಜೈಲಿನಲ್ಲಿ ಜನಸಂದಣಿ ಕಡಿಮೆ ಮಾಡಲು ಜೈಲಧಿಕಾರಿಗಳು ಮುಂದಾಗಿದ್ದಾರೆ.