ಬೆಂಗಳೂರು: ಕೋರಮಂಗಲದ ಕೋವಿಡ್ ಕೇರ್ ಸೆಂಟರ್ ಎ ಸಿಮ್ಟಮ್ಯಾಟಿಕ್ ಕೊರೊನಾ ರೋಗಿಗಳನ್ನು ಗುಣಪಡಿಸುವ ಬದಲು ಮತ್ತಷ್ಟು ರೋಗಕ್ಕೆ ಗುರಿಪಡಿಸುವ ಹಾಗಿದೆ ಎಂದು ಕೋವಿಡ್ ಬಾಧಿತರು ಆರೋಪಿಸಿದ್ದಾರೆ.
ಹೌದು ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿರುವ ಸಿಸಿಸಿ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ರೋಗಿಗಳಿಗೆ ಬಿಸಿ ನೀರು ಸಿಗುತ್ತಿಲ್ಲ. ಮೊದಲನೇ ಮಹಡಿಯಲ್ಲಿ ಇರುವವರಿಗೆ ಬಾತ್ ರೂಂ, ಟಾಯ್ಲೆಟ್ಗೂ ನೀರಿಲ್ಲ. ಸಿಂಕ್, ವೆಸ್ಟರ್ನ್ ಟಾಯ್ಲೆಟ್ಗಳ ಒಳಗಡೆ ನೀರು ಕಟ್ಟಿದೆ. ಕಸ ವಿಲೇವಾರಿಯೂ ನಡೆದಿಲ್ಲ. ಊಟದ ತಟ್ಟೆ, ಬಾಟಲಿಗಳು ಕಸದ ಬುಟ್ಟಿಯಿಂದ ಹೊರಗೆ ಚೆಲ್ಲಿವೆ ಎಂಬ ದೂರುಗಳು ಕೇಳಿ ಬಂದಿವೆ.
ಇನ್ನು ರೋಗಿಗಳಿಗೆ ಸರಿಯಾಗಿ ಮಾತ್ರೆಗಳೂ ಪೂರೈಕೆಯಾಗುತ್ತಿಲ್ಲ. ಮಾತ್ರೆಯ ಹೆಸರು ಹೇಳಿ ನೀವೇ ತರಿಸಿಕೊಳ್ಳಿ ಎಂದು ರೋಗಿಗಳಿಗೇ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಒಟ್ಟಿನಲ್ಲಿ ಆರಂಭದ ಎರಡು ವಾರ ಸ್ವಚ್ಛವಾಗಿದ್ದ ಕೋವಿಡ್ ಕೇರ್ ಸೆಂಟರ್ ಈಗ ನಿರ್ವಹಣೆಯಿಲ್ಲದೇ ಕೊಳಕಾಗಿದೆ. ಕೊರೊನಾ ರೋಗಿಗಳಿಗೂ ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.