ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಾನ ಬದಲಾವಣೆಯಾಗಲಿದೆ ಎಂಬ ಮಾತಿಗೆ ಸ್ಪಷ್ಟವಾದ ನಿರಾಕರಣೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವ್ಯಕ್ತವಾಗಿದೆ.
ವಯೋಮಿತಿ ಮೀರಿದ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪರನ್ನ ಕೆಳಗಿಳಿಸಿ ಬೇರೊಬ್ಬ ನಾಯಕರನ್ನು ನೇಮಿಸಲಾಗುತ್ತದೆ ಎಂಬ ಮಾತು ಕಳೆದ ಕೆಲ ತಿಂಗಳುಗಳಿಂದ ಕೇಳಿ ಬರುತ್ತಿತ್ತು. ಅಲ್ಲದೆ ಸಿಎಂಗೆ ರಾಜ್ಯದಲ್ಲಿ ಯಾವುದೇ ರೀತಿಯ ರಾಜಕೀಯ ಹಿಡಿತ ಇಲ್ಲ. ಇವರು ಸಂಪೂರ್ಣ ದುರ್ಬಲರಾಗಿದ್ದಾರೆ ಎಂಬ ವಾದ ಕೂಡ ಕೇಳಿ ಬಂದಿತ್ತು. ಪಕ್ಷದ ಹೈಕಮಾಂಡ್ಅನ್ನು ಯಡಿಯೂರಪ್ಪ ಎದುರು ಹಾಕಿಕೊಂಡಿದ್ದಾರೆ. ಇವರ ನಡವಳಿಕೆಯನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಬದಲಾವಣೆಗೆ ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ನಿನ್ನೆ ಮುಕ್ತಾಯವಾದ 2 ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಈ ಮೇಲಿನ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವ ಕಾರ್ಯ ಆಗಿದೆ.
ಸಭೆಗೆ ತೆರಳುವ ಮುನ್ನವೇ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂಬ ಸ್ಪಷ್ಟ ಮಾಹಿತಿ ನೀಡಿದ್ದ ಅರುಣ್ ಸಿಂಗ್, ಕಾರ್ಯಕಾರಿಣಿಯಲ್ಲಿ ಅತ್ಯಂತ ಪ್ರಮುಖವಾಗಿ ಎಲ್ಲ ಸದಸ್ಯರಿಗೂ ಇದೇ ವಿಚಾರವನ್ನು ಮನದಟ್ಟು ಮಾಡಿದ್ದಾರೆ. ಈ ಮೂಲಕ ಯಡಿಯೂರಪ್ಪ ಸ್ಥಾನ ಭದ್ರವಾಗಿದ್ದು, ಮುಂಬರುವ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಇಲ್ಲವೆ ಪುನರ್ ರಚನೆ ಸೇರಿದಂತೆ ಯಾವುದೇ ರೀತಿಯ ನಿರ್ಧಾರ ಕೈಗೊಳ್ಳಲೂ ಸಿಎಂ ಬಿಎಸ್ವೈಗೆ ಯಾವುದೇ ಅಡೆತಡೆ ಎದುರಾಗದು ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ.
ಮತ್ತೊಮ್ಮೆ ಸ್ಪಷ್ಟಪಡಿಸಿದ ಅರುಣ್ ಸಿಂಗ್
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಅವರೇ ಸುಪ್ರೀಂ. ಸಂಪುಟ ವಿಸ್ತರಣೆ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಎರಡು ದಿನಗಳ ಕಾರ್ಯಕಾರಣಿ ನಂತರ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟವಾಗಿ ಪಕ್ಷದ ಸಂದೇಶವನ್ನು ರಾಜ್ಯ ಬಿಜೆಪಿ ನಾಯಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಎಂ ನಾಯಕತ್ವ ಬದಲಾವಣೆ ಕುರಿತ ಚರ್ಚೆ ಅನಗತ್ಯ. ಯಡಿಯೂರಪ್ಪ ಅವರೇ ರಾಜ್ಯದ ನಾಯಕರು. ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ. ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟವಾಗಿ ಅರುಣ್ ಸಿಂಗ್ ಹೇಳಿದ್ದಾರೆ.
ವಿಶೇಷ ಎಂದರೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ದನಿಯೆತ್ತಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎಲ್ಲಾ ನಾಯಕರ ವಿರುದ್ಧವೂ ಅರುಣ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಾಯಕತ್ವ ಪ್ರಶ್ನಿಸುವವರ ವಿರುದ್ಧ ಕೇಂದ್ರ ಶಿಸ್ತು ಸಮಿತಿ ಗಮನಹರಿಸಲಿದೆ ಎಂದಿದ್ದಾರೆ. ಈ ಮೂಲಕ ಅಪಸ್ವರ ಎತ್ತಿದವರಿಗೆ ಅರುಣ್ ಸಿಂಗ್ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ.
ಕಟೀಲ್ ಪೂರಕ ಮಾತು
ಆರಂಭದಿಂದಲೂ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಪಕ್ಷವೇ ಬೇರೆ, ಸರ್ಕಾರವೇ ಬೇರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಈ ಕಾರ್ಯಕಾರಣಿಯಲ್ಲಿ ಈ ಒಂದು ವಿಚಾರಕ್ಕೂ ಪೂರ್ಣ ವಿರಾಮ ಬಿದ್ದಿದೆ. ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಸಿಎಂ ಬಿ.ಎಸ್.ಯಡಿಯೂರಪ್ಪ ಪರವಾಗಿ ಮಾತನಾಡಿದ್ದು, ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಆ ವಿಚಾರ ಎಲ್ಲಿಯೂ ಚರ್ಚೆಗೆ ಬಂದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಕಾರಣಿಯ ಯಶಸ್ಸು ಇಂದು ಬೆಂಗಳೂರಿನಲ್ಲಿ ಮುಂದುವರಿದಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಲಭಿಸಿದ ಬಲವನ್ನು ಆಧರಿಸಿ ನಗರದಲ್ಲಿ ಯಶಸ್ವಿಯಾಗಿ ಶಾಸಕರ ಸಭೆ ನಡೆಸಿದ್ದಾರೆ. ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳು, ಗ್ರಾಮ ಪಂಚಾಯಿತಿ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳು ನಡೆದಿವೆ. ಕೊರೊನಾ, ನೆರೆ, ಬರ ಸೇರಿದಂತೆ ರಾಜ್ಯಕ್ಕೆ ಎದುರಾದ ಹಲವು ಸಮಸ್ಯೆಗಳ ಸಂದರ್ಭ ಯಡಿಯೂರಪ್ಪ ನಿರ್ವಹಿಸಿದ ಕಾರ್ಯನಿರ್ವಹಣೆ ಸರ್ವ ರೀತಿಯಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ. ಹತ್ತು ಹಲವು ವಿಚಾರಗಳನ್ನು ಮುಂದಿಟ್ಟು ರಾಷ್ಟ್ರೀಯ ಬಿಜೆಪಿ ನಾಯಕರು ಅಂತಿಮವಾಗಿ ನಾಯಕತ್ವ ಬದಲಾವಣೆ ಇಲ್ಲ ಎಂದು ಅಧಿಕೃತವಾಗಿ ಘೋಷಿಸುವ ಮೂಲಕ ಈಗಲೂ ಬಿಎಸ್ವೈ ಕರ್ನಾಟಕ ಬಿಜೆಪಿಗೆ ಅನಿವಾರ್ಯ ಎಂಬುದನ್ನು ತೋರಿಸಿಕೊಟ್ಟಿದೆ.