ಬೆಂಗಳೂರು: ಇಂದು ಮಧ್ಯಾಹ್ನ ಮಂಡ್ಯದಲ್ಲಿ ನಡೆಯಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಅಮಿತ್ ಶಾ ಆಗಮಿಸಿದ್ದು, ಪ್ರಧಾನಿ ಮೋದಿ ಅವರ ತಾಯಿ ನಿಧನದ ಹಿನ್ನೆಲೆ ಕಾರ್ಯಕ್ರಮಗಳ ಬದಲಾವಣೆ ಮಾಡಬಹುದು ಎನ್ನಲಾಗಿತ್ತು. ಆದರೆ ಇಂದು ಬೆಳಗ್ಗೆಯೇ ಹೀರಾಬೆನ್ ಅವರ ಅಂತ್ಯಕ್ರಿಯೆ ನಡೆದಿದೆ. ಹೀಗಾಗಿ ಮಧ್ಯಾಹ್ನ ಮಂಡ್ಯದಲ್ಲಿ ಆಯೋಜನೆಗೊಂಡಿರುವ ಸಮಾವೇಶ ಪೂರ್ವ ನಿಗದಿಯಂತೆ ನಡೆಯಲಿದೆ ಎಂದು ಬಿಜೆಪಿ ನಾಯಕರು ಮಾಹಿತಿ ನೀಡಿದ್ದಾರೆ.
ಬಿಜೆಪಿ ಮಾಧ್ಯಮ ಘಟಕ ಕೂಡ ಅಮಿತ್ ಶಾ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಂತಾಪ ಸೂಚಿಸಿ ಕಾರ್ಯಕ್ರಮ ಆರಂಭಿಸಲಾಗುತ್ತದೆ. ಎಲ್ಲ ಕಾರ್ಯಕ್ರಮಗಳೂ ನಿಗದಿತ ಸಮಯಕ್ಕೆ ನಡೆಯಲಿವೆ ಎಂದು ತಿಳಿಸಿದೆ.
ಅಮಿತ್ ಶಾ ಕಾರ್ಯಕ್ರಮದ ವೇಳಾಪಟ್ಟಿ: ರಾಜ್ಯಕ್ಕೆ 2 ದಿನಗಳ ಭೇಟಿಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಇಂದು ಮಂಡ್ಯ ಜಿಲ್ಲೆಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇಂದು ಸಂಜೆ 5.20ಕ್ಕೆ ಯಲಹಂಕ ವಾಯುನೆಲೆಗೆ ಅಮಿತ್ ಶಾ ವಾಪಸ್ ಆಗಲಿರುವ ಅಮಿತ್ ಶಾ, 5.40ಕ್ಕೆ ಅರಮನೆ ಮೈದಾನಕ್ಕೆ ಭೇಟಿ ನೀಡಲಿದ್ದಾರೆ. ಸಂಜೆ 6.45 ರವರೆಗೆ ಸಹಕಾರಿ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಅಂದು ರಾತ್ರಿ 8 ರಿಂದ 9.30ರವರೆಗೆ ಪಕ್ಷದ ಮುಖಂಡರ ಜೊತೆ ಸಭೆ ನಡೆಸಲು ಸಮಯ ಕಾಯ್ದಿರಿಸಿದ್ದಾರೆ. ಈ ವೇಳೆ ಪಕ್ಷ ಸಂಘಟನೆ, ಪಕ್ಷಕ್ಕೆ ಎದುರಾಗಿರುವ ಸವಾಲುಗಳು ಸೇರಿದಂತೆ ಸಂಘಟನಾತ್ಮಕ ವಿಚಾರಗಳ ಕುರಿತು ರಾಜ್ಯ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಪ್ರತ್ಯೇಕವಾಗಿ ಮಾತುಕತೆ ನಡೆಸಿ ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ. ನಾಯಕರ ಜೊತೆಗಿನ ಸಭೆ ನಂತರ ರಾತ್ರಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಲಿದ್ದಾರೆ.
ಡಿ. 31 ರಂದು ಬೆಳಗ್ಗೆ 8.30 ರಿಂದ 9.30 ರವರೆಗೆ ಪಕ್ಷದ ಮುಖಂಡರ ಜೊತೆ ಉಪಹಾರ ಕೂಟ ನಡೆಸಲಿದ್ದಾರೆ. ಈ ವೇಳೆಯೂ ರಾಜಕೀಯ ವಿಚಾರಗಳ ಕುರಿತು ನಾಯಕರ ಜೊತೆ ಸಮಾಲೋಚನೆ ನಡೆಸಿ ಸದ್ಯದ ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ. ನಂತರ ದೇವನಹಳ್ಳಿ ತಾಲೂಕಿನ ಅವತಿ ಗ್ರಾಮಕ್ಕೆ ತೆರಳಲಿದ್ದು, 11 ರಿಂದ 12.30 ರವರೆಗೆ ನಡೆಯಲಿರುವ ಭೂಮಿ ಪೂಜೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 1 ರಿಂದ 2.30 ರವರೆಗೆ ಮಲ್ಲೇಶ್ವರಂನ ಸೌಹಾರ್ಧ ಸಹಕಾರಿ ಫೆಡರೇಷನ್‌ಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ 4.30ರವರೆಗೆ ಬೂತ್ ಅಧ್ಯಕ್ಷರು ಮತ್ತು ಬೂತ್ ಮಟ್ಟದ ಏಜೆಂಟ್ಗಳ ಸಭೆಯನ್ನು ಅರಮನೆ ಮೈದಾನದಲ್ಲಿ ನಡೆಸಲಿದ್ದಾರೆ. ಸಂಜೆ 5.05 ಗಂಟೆಗೆ ಯಲಹಂಕ ವಾಯುನೆಲೆಯಿಂದ ದೆಹಲಿಗೆ ತೆರಳುವರು.
ಗೃಹ ಸಚಿವ ಅಮಿತ್ ಶಾ ಸಂತಾಪ: ಗೌರವಾನ್ವಿತ ಮಾತಾಜಿ ಹೀರಾ ಬಾ ಅವರ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ತಾಯಿ ಒಬ್ಬ ವ್ಯಕ್ತಿಯ ಜೀವನದ ಮೊದಲ ಸ್ನೇಹಿತ ಮತ್ತು ಶಿಕ್ಷಕರಾಗಿರುತ್ತಾರೆ. ಕುಟುಂಬ ಪೋಷಣೆಗಾಗಿ ಹೀರಾ ಬಾ ಅವರು ಎದುರಿಸುತ್ತಿರುವ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. ಅವರ ತ್ಯಾಗದ ತಪಸ್ವಿ ಜೀವನ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ಈ ದುಃಖದ ಸಮಯದಲ್ಲಿ ಇಡೀ ರಾಷ್ಟ್ರವು ಪ್ರಧಾನಿ ಮೋದಿ ಮತ್ತು ಅವರ ಕುಟುಂಬದೊಂದಿಗೆ ನಿಂತಿದೆ. ಕೋಟಿ ಕೋಟಿ ಜನರ ಪ್ರಾರ್ಥನೆ ನಿಮ್ಮೊಂದಿಗಿದೆ. ಓಂ ಶಾಂತಿ ಎಂದು ಅಮಿತ್ ಶಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದರು.
ಓದಿ: ತಾಯಿಯ ಅಂತಿಮ ದರ್ಶನ ಪಡೆದ ಪ್ರಧಾನಿ.. ಅಮ್ಮನ ಪಾರ್ಥಿವ ಶರೀರಕ್ಕೆ ಹೆಗಲುಕೊಟ್ಟ ಮೋದಿ!