ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ನಿಯಂತ್ರಣ ಮಾಡುವ ದೃಷ್ಟಿಯಿಂದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆ ಮೇರೆಗೆ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದೇ ಡಿಸೆಂಬರ್ 28 ರಿಂದ ಜನವರಿ 7ರ ತನಕ ನೈಟ್ ಕರ್ಫ್ಯೂ ಜೊತೆಗೆ ವರ್ಷಾಚರಣೆಗೂ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಜಾರಿಗೆ ತಂದ ಟಫ್ ರೂಲ್ಸ್ಗೆ ಆರಂಭದಲ್ಲೇ ವಿರೋಧ ವ್ಯಕ್ತವಾಗಿದ್ದು, 50-50 ರೂಲ್ಸ್ಗೆ ಹೋಟೆಲ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆ ಬಸ್ ನಿಲ್ದಾಣ ಹಾಗು ರೈಲ್ವೆಯಲ್ಲಿ ನಿರ್ಬಂಧ ಹಾಕಿಲ್ಲ. ಆದರೆ, ಹೋಟೆಲ್, ರೆಸ್ಟೋರೆಂಟ್, ಬಾರ್ನಲ್ಲಿ ಕುಳಿತು ಊಟ ಮಾಡುವವರಿಗೆ ಮಾತ್ರ ನಿರ್ಬಂಧಿಸಲಾಗಿದೆ. ಸರ್ಕಾರದ ಈ ನಿರ್ಧಾರ ಹೋಟೆಲ್ ಉದ್ಯಮಿಗಳಿಗೆ ಆಘಾತ ನೀಡಿದೆ. ಸರ್ಕಾರ ಈ ಆದೇಶ ಮರುಪರಿಶೀಲನೆ ಮಾಡಬೇಕು. ಶೇ. 50 ರಷ್ಟು ನಿರ್ಬಂಧ ರದ್ದು ಮಾಡಬೇಕೆಂದು ಹೋಟೆಲ್ ಉದ್ಯಮಿಗಳು ಆಗ್ರಹಿಸಿದ್ದು, ನಿರ್ಬಂಧ ಸಡಿಲಿಕೆಗೆ ರಾಜ್ಯ ಹೋಟೆಲ್ ಮಾಲೀಕರ ಸಂಘದ ಮುಖಂಡ ಮಧುಕರ್ ಶೆಟ್ಟಿ ಒತ್ತಾಯಿಸಿದ್ದಾರೆ.
ಇತ್ತ ಬೆಂಗಳೂರಿನಲ್ಲಿ ಆಟೋ ಟ್ಯಾಕ್ಸಿ ಚಾಲಕರ ಸಂಘದಿಂದ ಬಾರಿ ವಿರೋಧ ವ್ಯಕ್ತವಾಗಿದ್ದು, ಸರ್ಕಾರದ ಮಾರ್ಗಸೂಚಿ ಬದಲಾವಣೆಗೆ ಆಟೋ ಟ್ಯಾಕ್ಸಿ ಚಾಲಕರು ಪಟ್ಟು ಹಿಡಿದಿದ್ದಾರೆ. ರಾತ್ರಿ ವೇಳೆ ಆಟೋ ಟ್ಯಾಕ್ಸಿ ಸಂಚಾರಕ್ಕೂ ಅವಕಾಶ ನೀಡಬೇಕು. ಸರ್ಕಾರಿ ಬಸ್ಗಳ ಸಂಚಾರಕ್ಕೆ ಅವಕಾಶ ಕೊಟ್ಟಿದ್ದೀರಾ?, ನಮಗ್ಯಾಕೆ ಅವಕಾಶ ಇಲ್ಲ ಅಂತ ಪ್ರಶ್ನಿಸಿದ್ದಾರೆ.
ಕೋವಿಡ್ನಿಂದ ಈಗಾಗಲೇ ನಷ್ಟದಲ್ಲಿ ಇದ್ದೇವೆ. ಇದೀಗ ಮತ್ತೆ ನಿರ್ಬಂಧ ವಿಧಿಸಿದರೆ ಆರ್ಥಿಕವಾಗಿ ಸಮಸ್ಯೆ ಆಗುತ್ತೆ ಅಂತ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮನವಿ ಮಾಡಿದ್ದಾರೆ.
ನೈಟ್ ಕರ್ಫ್ಯೂ ಜಾರಿಗೆ ತಂದಿರುವ ಸರ್ಕಾರದ ವಿರುದ್ಧ ಓಲಾ, ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷ ಕೂಡ ಆಕ್ರೋಶ ಹೊರಹಾಕಿದ್ದು, ಬಡ ಚಾಲಕರ ಹೊಟ್ಟೆ ಮೇಲೆ ಸರ್ಕಾರ ಹೊಡೆಯುತ್ತಿದೆ. ರಾತ್ರಿ ಹೊತ್ತು ಕೆಲಸ ಮಾಡುವ ಚಾಲಕರ ಬದುಕನ್ನ ಸರ್ಕಾರ ಕಿತ್ತುಕೊಂಡಿದೆ. ಕೂಡಲೇ ನೈಟ್ ಕರ್ಫ್ಯೂ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ.
ಓದಿ: ಭದ್ರಾವತಿಯಲ್ಲಿ ಘರ್ ವಾಪಸಿ.. ನಾಲ್ಕು ದಶಕದ ಬಳಿಕ ಹಿಂದೂ ಧರ್ಮಕ್ಕೆ ಮರಳಿದ ಕುಟುಂಬ