ಬೆಂಗಳೂರು: ರಾಜ್ಯದ 8 ನಗರಗಳಲ್ಲಿನ ಕೊರೊನಾ ಕರ್ಫ್ಯೂ ಏಪ್ರಿಲ್ 20 ರವರೆಗೂ ಮುಂದುವರೆಯಲಿದ್ದು, ಹೊಸದಾಗಿ ಯಾವುದೇ ನಿರ್ಧಾರವನ್ನು ಇಂದು ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಮಹಾಮಾರಿ ಮಿತಿಮೀರಿ ಹೋಗುತ್ತಿದೆ. ಅಧಿಕಾರಿಗಳ ಜೊತೆ ತಜ್ಞರ ಅಭಿಪ್ರಾಯದ ಬಗ್ಗೆ ಚರ್ಚೆ ಮಾಡಿದ್ದೇವೆ. ರಾತ್ರಿ 10 ರಿಂದ ಬೆಳಗ್ಗೆ 5 ರ ವರೆಗಿನ ನೈಟ್ ಕರ್ಫ್ಯೂ ಮುಂದುವರೆಸುತ್ತೇವೆ. ಬೇರೆ ಯಾವ ಜಿಲ್ಲೆಗಳಲ್ಲಿ ಕೊರೊನಾ ಕರ್ಫ್ಯೂ ಹಾಕಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡುತ್ತೇವೆ. ಸದ್ಯ ಕೊರೊನಾ ಕರ್ಫ್ಯೂ 20 ನೇ ತಾರೀಖಿನವರೆಗೂ ಇದೇ ರೀತಿ ಮುಂದುವರೆಯುತ್ತದೆ. ಉಳಿದಂತೆ ಬೇರೆ ಯಾವುದೇ ನಿರ್ಧಾರ ಮಾಡಿಲ್ಲ ಎಂದರು.
ಏ.20 ರಂದು ಮತ್ತೆ ಸಭೆ: ನಮ್ಮ ರಾಜ್ಯವನ್ನ ಬೇರೆ ರಾಜ್ಯಗಳಿಗೆ ಹೋಲಿಸೋಕೆ ಹೋಗಬೇಡಿ. ನಮ್ಮ ರಾಜ್ಯದ ಪರಿಸ್ಥಿತಿ ಬೇರೆ ಇದೆ. ಏ.20 ರಂದು ಮತ್ತೆ ಅಧಿಕಾರಿಗಳ ಜೊತೆ ಕುಳಿತು ನಿರ್ಧಾರ ಮಾಡುತ್ತೇವೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಬೇಡ: ಶ್ರೀರಾಮುಲು
ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ, ಬೆಂಗಳೂರು ನಗರ ಸೇರಿದಂತೆ ರಾಜ್ಯದೆಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಇಂತಿವೆ:
- ಕಾರ್ಪೋರೇಟ್ ವಲಯದ ಆಸ್ಪತ್ರೆಗಳು ತಮ್ಮ ಹತ್ತಿರದ ಹೋಟೆಲ್ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಡಿಮೆ ರೋಗ ಲಕ್ಷಣಗಳುಳ್ಳ ರೋಗಿಗಳನ್ನು ನೋಡಿಕೊಳ್ಳಲು ತಾತ್ಕಾಲಿಕ ಆಸ್ಪತ್ರೆಗಳನ್ನು ಆರಂಭಿಸಲು ಕ್ರಮ ವಹಿಸುವುದು.
- ಹೆಚ್ಚು ರೋಗ ಲಕ್ಷಣಗಳುಳ್ಳ ಅಗತ್ಯವಿರುವ ರೋಗಿಗಳನ್ನು ಮಾತ್ರ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲು ಕ್ರಮ ವಹಿಸುವುದು.
- ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಸರ್ಕಾರದಿಂದ ದಾಖಲಿಸುವ ರೋಗಿಗಳಿಗೆ ಕಾಯ್ದಿರಿಸಲು ಕೂಡಲೇ ಕ್ರಮ ಕೈಗೊಳ್ಳುವುದು.
- ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 1000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸುವುದು.
- ಸರ್ಕಾರಿ ಆಸ್ಪತ್ರೆಗಳಲ್ಲಿ 1000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸುವುದು.
- ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ 5,000 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಕಾಯ್ದಿರಿಸುವುದು.
- ಅಗತ್ಯವಿರುವ ರೋಗಿಗಳಿಗೆ ಕೂಡಲೇ ಚಿಕಿತ್ಸೆ ನೀಡಲು ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಓರ್ವ ಐಎಎಸ್ ಹಾಗೂ ಓರ್ವ ಐಪಿಎಸ್ ಅಧಿಕಾರಿಗಳನ್ನು ಹಾಗೂ ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ ಮತ್ತು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸುವುದು.
- ಕೊರೊನಾ ವೈರಸ್ನಿಂದ ತೀವ್ರತರವಾಗಿ ಬಳಲುತ್ತಿರುವ ರೋಗಿಗಳಿಗೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು. ಉಳಿದಂತೆ ಕೊರೊನಾ ಲಕ್ಷಣಗಳಿಲ್ಲದ ರೋಗಿಗಳಿಗೂ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವುದು ಹಾಗೂ ಅಗತ್ಯವಿರುವಷ್ಟು ದಿನಗಳು ಮಾತ್ರ ರೋಗಿಗಳನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿ ಗುಣಮುಖರಾದ ಕೂಡಲೇ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವುದು.
- ರಾಜ್ಯದಲ್ಲಿ ಸದ್ಯಕ್ಕೆ ರೆಮಿಡಿಸಿವಿರ್ ಕೊರತೆ ಇರುವುದಿಲ್ಲ. ಆದಾಗ್ಯೂ ಹೆಚ್ಚುವರಿ ಡೋಸ್ಗಳನ್ನು ಖರೀದಿ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಅದನ್ನು ಅಂತಿಮಗೊಳಿಸಿ ಹೆಚ್ಚುವರಿ ಡೋಸ್ಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳುವುದು.
- ಪ್ರಸಕ್ತ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರುವುದಿಲ್ಲ. ಆದಾಗ್ಯೂ 5,000 ಆಕ್ಸಿಜನ್ ಸಿಲಿಂಡರ್ಗಳ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು.
- ಪದೇ ಪದೇ ಆಕ್ಸಿಜನ್ ಸಿಲಿಂಡರ್ಗಳ ಬದಲಾವಣೆ ತಪ್ಪಿಸಲು ಜಂಬೋ ಸಿಲಿಂಡರ್ಗಳನ್ನು ಖರೀದಿಸಲು ಕೂಡಲೇ ಕ್ರಮ ಕೈಗೊಳ್ಳುವುದು.
- ಈಗಾಗಲೇ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದ್ದು, ಅದೇ ರೀತಿಯಾಗಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಟೆಂಡರ್ ಕರೆದಿದ್ದು, ಕೂಡಲೇ ಅದನ್ನು ಅಂತಿಮಗೊಳಿಸಿ ಘಟಕ ಸ್ಥಾಪಿಸಲು ತ್ವರಿತ ಕ್ರಮ ಕೈಗೊಳ್ಳುವುದು.
- ಫ್ರಂಟ್ಲೈನ್ ವರ್ಕರ್ಗಳಾದ ವೈದ್ಯರು, ನರ್ಸ್ಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಕೂಡಲೇ ಕ್ರಮ ಕೈಗೊಳ್ಳುವುದು.
- ರಾಜ್ಯಾದ್ಯಂತ ಕಾಂಟ್ಯಾಕ್ಟ್ ಟ್ರೇಸಿಂಗ್ ತ್ವರಿತಗೊಳಿಸುವುದು.
- ಹೋಮ್ ಐಸೋಲೇಷನ್ ಇರುವ ರೋಗಿಗಳಿಗೆ ಮುದ್ರೆ ಹಾಕಲು ಕ್ರಮ ಕೈಗೊಳ್ಳುವುದು.
- ಪ್ರತಿದಿನ ನಡೆಸುವ ಕೋವಿಡ್ ಟೆಸ್ಟ್ ಟೆಸ್ಟ್ ರಿಪೋರ್ಟ್ 24 ಗಂಟೆಯೊಳಗಾಗಿ ತಪ್ಪದೇ ಲಭ್ಯವಾಗುವಂತೆ ಕ್ರಮ ವಹಿಸಲಾವುದು ಮತ್ತು ಟೆಸ್ಟಿಂಗ್ ಅವಧಿಯನ್ನು ಇನ್ನೂ ಕಡಿಮೆಗೊಳಿಸಲು ಕೂಡಲೇ ಅಗತ್ಯ ಕ್ರಮ ವಹಿಸುವುದು.
- ಕಂಟೈನ್‌ಮೆಂಟ್ ಝೋನ್ಗಳನ್ನು ಮತ್ತು ಮೈಕ್ರೋ ಕಂಟೈನ್‌ಮೆಂಟ್ ಝೋನ್ಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು.
- ಅನಗತ್ಯವಾಗಿ ಜನ ಗುಂಪು ಸೇರುವುದನ್ನು ತಡೆಗಟ್ಟಲು ಎಲ್ಲಾ ಕ್ರಮ ಕೈಗೊಳ್ಳುವುದು.
- ಬೇಡಿಕೆಗನುಗುಣವಾಗಿ ಉಚಿತವಾಗಿ 108 ಸೇರಿದಂತೆ ಅಗತ್ಯ ಆಂಬ್ಯುಲೆನ್ಸ್ ಗಳನ್ನು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಕೆಂದ್ರಗಳಲ್ಲೂ ಲಭ್ಯವಿರುವಂತೆ ನೋಡಿಕೊಳ್ಳುವುದು.
- ಬೆಂಗಳೂರು ನಗರದಲ್ಲಿ ಒಟ್ಟಾರೆಯಾಗಿ 400 ಆಂಬ್ಯೂಲೆನ್ಸ್ಗಳನ್ನು ಕೋವಿಡ್ ರೋಗಿಗಳಿಗೋಸ್ಕರ ಉಚಿತವಾಗಿ ಸೇವೆ ಒದಗಿಸಲು ಮೀಸಲಿರಿಸುವುದು.
- ಬೆಂಗಳೂರು ನಗರದಲ್ಲಿ ಕೋವಿಡ್ನಿಂದಾಗಿ ಮೃತಪಟ್ಟ ಶವಗಳ ಸಾಗಿಸಲು 49 ಆಂಬ್ಯುಲೆನ್ಸ್ಗಳನ್ನು ಉಚಿತವಾಗಿ ಸೇವೆ ಒದಗಿಸಲು ಮೀಸಲಿರಿಸುವುದು.
- ಚಿತಾಗಾರಗಳಲ್ಲಿ ಕೋವಿಡ್ನಿಂದಾಗಿ ಮೃತಪಟ್ಟ ಶವಗಳ ಅಂತ್ಯ ಕ್ರಿಯೆಯನ್ನು ಉಚಿತವಾಗಿ ನೆರವೇರಿಸುವುದು.
- ಬಿಬಿಎಂಪಿಯು ತನ್ನ ಎಲ್ಲಾ ವಲಯಗಳ ಮತ್ತು ನಿಯಂತ್ರಣ ಕೊಠಡಿಗಳನ್ನು ಸಜ್ಜುಗೊಳಿಸಿ ಕೋವಿಡ್ ರೋಗಿಗಳ ಸಹಾಯಕ್ಕೆ ಸದಾ ಬದ್ಧರಾಗಿರುವಂತೆ ಕ್ರಮ ವಹಿಸುವುದು ಹಾಗೂ ಸಹಾಯವಾಣಿಗಳಿಗೆ ನುರಿತ ವ್ಯಕ್ತಿಗಳನ್ನು ನೇಮಿಸಿ ಸದೃಢಗೊಳಿಸುವುದು.