ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಇಬ್ಬರು ಶಂಕಿತ ಉಗ್ರರ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ರಾಜಧಾನಿಯಲ್ಲಿ ಉಗ್ರ ಚಟುವಟಿಕೆ ನಡೆಸುವ ಹುನ್ನಾರದಿಂದ ಯುವಕರಿಗೆ ತರಬೇತಿ ನೀಡುತ್ತಿದ್ದರು ಎನ್ನಲಾದ ಈ ಇಬ್ಬರನ್ನು ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಎನ್‌ಐಎ ಬಂಧಿಸಿತ್ತು.
ತಮಿಳುನಾಡು ಮೂಲದ ಅಹ್ಮದ್ ಅಬ್ದುಲ್ ಖಾದರ್ ಮತ್ತು ಇರ್ಫಾನ್ ನಾಸಿರ್ ಬಂಧಿತರು. ಆರೋಪಿಗಳಿಬ್ಬರು ಭಯೋತ್ಪಾದನೆ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದು, ಮುಸ್ಲಿಂ ಯುವಕರನ್ನು ಈ ಕೃತ್ಯಗಳಿಗೆ ಪ್ರೇರೇಪಿಸುತ್ತಿದ್ದರು ಎಂದು ಹೇಳಲಾಗಿದೆ.
ಯುವಕರಿಗೆ ನಿಷೇಧಿತ ಭಯೋತ್ಪಾದಕ ಸಂಘಟನೆ ಐಎಸ್ ಸಿದ್ಧಾಂತ ಮತ್ತು ಚಟುವಟಿಕೆ ಬಗ್ಗೆ ತರಬೇತಿ ನೀಡಿ, ಸಿರಿಯಾ ದೇಶಕ್ಕೆ ಕಳುಹಿಸುತ್ತಿದ್ದ ಗುರುತರ ಆರೋಪ ಇವರ ಮೇಲಿದೆ.
ಬಂಧಿತ ಅಬ್ದುಲ್ ಖಾದರ್, ಇರ್ಫಾನ್ ನಾಸೀರ್ 'ಕುರಾನ್ ಸರ್ಕಲ್' ಎಂಬ ವಾಟ್ಸ್ಆ್ಯಪ್ ಗ್ರೂಪ್ ರಚನೆ ಮಾಡಿಕೊಂಡು, ಅದರಲ್ಲಿ ನಗರದ ಮುಸ್ಲಿಂ ಯುವಕರನ್ನು ಒಗ್ಗೂಡಿಸಿ ಪ್ರಚೋದಿಸುತ್ತಿದ್ದರು. ಇವರನ್ನು ಬಂಧಿಸಿದ್ದ ರಾಷ್ಟ್ರೀಯ ತನಿಖಾ ದಳ ಎಲೆಕ್ಟ್ರಾನಿಕ್ ಸಾಧನ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದಿತ್ತು.