ಬೆಂಗಳೂರು : ಸಹೋದರನ ಮಗಳ ಮದುವೆಗೆ ಹಾಜರಾಗಲು ಪ್ರತ್ಯೇಕ ಪ್ರಕರಣದ ಇಬ್ಬರು ಆರೋಪಿಗಳಿಗೆ ನಾಳೆ (ಗುರುವಾರ) ಒಂದು ದಿನ ರಜೆಗೆ ಎನ್ಐಎ ಕೋರ್ಟ್ ಅನುಮತಿ ನೀಡಿದೆ.
ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ಐದನೇ ಆರೋಪಿ ಪೀರ್ ಪಾಷಾ ಹಾಗೂ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ ಮೊದಲ ಆರೋಪಿ ಇರ್ಫಾನ್ ನಾಸೀರ್ಗೆ ಗುರುವಾರ ಒಂದು ದಿನ ವೈಯಕ್ತಿಕ ರಜೆ ನೀಡಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಅನುಮತಿ ನೀಡಿ ಆದೇಶಿಸಿದೆ. ಪೀರ್ ಪಾಷಾ ಮತ್ತು ಇರ್ಫಾನ್ ನಾಸೀರ್ ಇಬ್ಬರು ಸಹೋದರರಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ನಾಳೆ ಸಹೋದರನ ಮಗಳ ಮದುವೆ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗೆ ರಜೆ ನೀಡುವಂತೆ ಪ್ರತ್ಯೇಕವಾಗಿ ಸಲ್ಲಿಸಿದ್ದ ಆರೋಪಿಗಳ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿತು.
ನಾಳೆ ರಿಚರ್ಡ್ ಟೌನ್‌ನಲ್ಲಿ ಅಣ್ಣನ ಮಗಳ ಮದುವೆ ಹಾಜರಾಗುವಂತೆ ಕೋರ್ಟ್ ಷರತ್ತುಬದ್ದ ಅನುಮತಿ ನೀಡಿದೆ. ಬೆಳಗ್ಗೆ 10 ಗಂಟೆಯಿಂದ 4 ಗಂಟೆವರೆಗೆ ಮಾತ್ರ ಮದುವೆಯಲ್ಲಿ ಭಾಗಿಯಾಗುವಂತೆ ತಿಳಿಸಿದೆ. ಪೊಲೀಸ್ ಭದ್ರತೆಯಲ್ಲಿ ಆರೋಪಿಗಳ ಮದುವೆಯ ಸ್ಥಳಕ್ಕೆ ಕರೆದೊಯ್ಯಬೇಕು. ಈ ವೇಳೆ ಪೊಲೀಸರು ಸಮವಸ್ತ್ರ ಧರಿಸಕೂಡದು. ಆರೋಪಿಗಳಿಗೆ ಕೈಕೊಳವೂ ಹಾಕಕೂಡದು. ಎಸ್ಕಾರ್ಟ್‌ಗೆ ತಗುಲುವ ವೆಚ್ಚವನ್ನು ಜೈಲಾಧಿಕಾರಿಗಳಿಗೆ ಮುಂಗಡವಾಗಿ ಪಾವತಿಸಬೇಕೆಂದು ಷರತ್ತು ವಿಧಿಸಿ ನ್ಯಾಯಾಲಯದ ನ್ಯಾ.ಸಿ.ಎಂ.ಗಂಗಾಧರ ಸೂಚನೆ ನೀಡಿದರು.
ಇದನ್ನೂ ಓದಿ: ಖೋಟಾನೋಟು ಸಾಗಣೆ: ಮಹಿಳೆಗೆ ಅಪರಾಧಿ ಎಂದು ಘೋಷಿಸಿ ನಾಳೆಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿಸಿರುವ ಎನ್ಐಎ ಕೋರ್ಟ್