ಬೆಂಗಳೂರು: ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ( ಎನ್ಹೆಚ್ಎಂ) ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 24ರಿಂದ ಶುರುವಾದ ಮುಷ್ಕರ ಇನ್ನೂ ಮುಂದುವರೆದಿದೆ.
ಬರೋಬರಿ 12 ದಿನಗಳಿಂದ ಮುಷ್ಕರ ಕೈಗೊಂಡಿರುವ ನೌಕರರು ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ, ಗುತ್ತಿಗೆ ನೌಕರರ ಮುಷ್ಕರದ ಎಫೆಕ್ಟ್ ಖಾಯಂ ನೌಕರರ ಮೇಲೆ ಬೀರಿದೆ. ಕೆಲಸದ ಒತ್ತಡ ಹೆಚ್ಚಾಗಿದೆ ಅಂತಲೂ ಅಳಲು ತೋಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಇದೀಗ ಪ್ರತಿಭಟನಾ ನಿರತರೊಂದಿಗೆ ಆರೋಗ್ಯ ಸಚಿವ ಶ್ರೀರಾಮುಲು ಸಭೆ ಕರೆದಿದ್ದು, ವಿಧಾನಸೌಧಕ್ಕೆ ಇಲಾಖೆಯ ಅಧಿಕಾರಿಗಳು ಹಾಜರಾಗುವಂತೆ ಸೂಚಿಸಿದ್ದಾರೆ.
ನೌಕರರ ಮುಷ್ಕರ ಹಲವೆಡೆ ವ್ಯತ್ಯಯ: ಗುತ್ತಿಗೆ- ಹೊರ ಗುತ್ತಿಗೆ ನೌಕರರ ಮುಷ್ಕರದಿಂದಾಗಿ, ಕೋವಿಡ್ ತಪಾಸಣೆ, ಕೋವಿಡ್ ಕಾಲ್ ಸೆಂಟರ್, ಕೋವಿಡ್ ವರದಿ ಸೇರಿ ಲಸಿಕಾ ಕಾರ್ಯಕ್ರಮ, ತಾಯಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ, ಕ್ಷಯ ರೋಗ ನಿಯಂತ್ರಣ, ಅಂಧತ್ವ, ಒಳ ಮತ್ತು ಹೊರ ರೋಗಿಗಳ ತಪಾಸಣೆಗೆ ತೊಡಕಾಗಿದೆ. ಸದ್ಯ ಇಲಾಖೆಯ ಖಾಯಂ ನೌಕರರೇ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಹೆಚ್ಚಿನ ಹೊರೆಯಾಗಿದೆ.