ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಾಲಿವುಡ್, ಬಾಲಿವುಡ್ನ ಸ್ಟಾರ್ ನಟರು ವೆಬ್ ಸೀರಿಸ್ಗಳತ್ತ ಮುಖ ಮಾಡುತ್ತಿದ್ದು, ಇವರ ಸಾಲಿಗೆ ಚಂದನವನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಸೇರ್ಪಡೆ ಆಗಲಿದ್ದಾರೆ.
ನಾನು ಅಭಿನಯಿಸುತ್ತಿರುವ ವೆಬ್ ಸೀರಿಸ್ ಹೆಸರು 'ಓಂಕಾರ’ ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ ಸ್ಟಾರ್ ನಟರೊಬ್ಬರು ವೆಬ್ ಸೀರಿಸ್‌ನಲ್ಲಿ ನಟಿಸುವುದು ಇದೇ ಮೊದಲು. ಮುಂದಿನ ವರ್ಷ ನವಂಬರ್ ವೇಳೆಗೆ ನಟಿಸುತ್ತೇನೆ ಎಂದು 'ಆಯುಷ್ಮಾನ್ ಭವ' ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಶಿವರಾಜ್ ಕುಮಾರ್ ಹೇಳಿದ್ದಾರೆ.
ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ನಿರ್ಮಾಣದ ಸೀರಿಸ್ ಇದಾಗಿದ್ದು, ಸದ್ಯಕ್ಕೆ ನಿರ್ದೇಶಕರು ಯಾರು ಎನ್ನುವುದು ಅಂತಿಮ ಆಗಿಲ್ಲ. ನಿವೇದಿತಾ ಅವರೇ ಕತೆ ಬರೆದಿದ್ದಾರೆ. ನಿರ್ಮಾಣದ ಸಿದ್ಧತೆಯೂ ಆರಂಭವಾಗಿದೆ ಎಂದು ಬಹಿರಂಗ ಪಡಿಸಿದ್ದಾರೆ.
ನವಂಬರ್ ಶಿವಣ್ಣನಿಗೆ ಲಕ್ಕಿ ಎಂಬ ಮಾತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ನಗುತ್ತಲೆ ಉತ್ತರಿಸಿದ ಶಿವಣ್ಣ , ನನಗೂ ಹಾಗೆ ಅನ್ನಿಸ್ತಿದೆ. 1996ರಲ್ಲಿ 'ಜನುಮದ ಜೋಡಿ' ರಿಲೀಸ್ ಆಗಿತ್ತು. ಅಲ್ಲದೆ 'ಅಣ್ಣ ತಂಗಿ', 'ತವರಿಗೆ ಬಾ ತಂಗಿ' ಈ ಚಿತ್ರಗಳು ಸಹ ನವಂಬರ್ನಲ್ಲಿ ರಿಲೀಸ್ ಆಗಿದ್ದವು. ಆ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಈಗ ಮತ್ತೆ ನವಂಬರ್ ತಿಂಗಳಿನಲ್ಲಿ 'ಆಯುಷ್ಮಾನ್ ಭವ' ರಿಲೀಸ್ ಆಗ್ತಿದೆ ಎಂದರು.
'ಆಯುಷ್ಮಾನ್ ಭವ' ಚಿತ್ರ ಈ ವರ್ಷ ರಿಲೀಸ್ ಆಗುವ ಕೊನೆಯ ಚಿತ್ರವಾಗಿ. ಮುಂದಿನ ವರ್ಷ 'ಭಜರಂಗಿ- 2' ಹಾಗೂ ಇನ್ನೂ ಹೆಸರಿಡದ ಚಿತ್ರಕ್ಕೆ ಸಹಿ ಮಾಡಿದ್ದೇನೆ. ಆ ಚಿತ್ರವನ್ನು ತಮಿಳಿನ ನಿರ್ದೇಶಕರು ನಿರ್ದೇಶನ ಮಾಡಲಿದ್ದಾರೆ. ಆ ಚಿತ್ರ ಈ ಹಿಂದಿನ ಸಿನಿಮಾಗಳಿಗಿಂದ ವಿಭಿನ್ನವಾಗಿರಲಿದೆ. ಸತ್ಯಜ್ಯೋತಿ ಫಿಲಂ ಅವರು ನಿರ್ಮಾಣ ಮಾಡ್ತಿದ್ದು ಶೀಘ್ರದಲ್ಲೇ ನಿರ್ಮಾಪಕರು ಟೈಟಲ್ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.