ಬೆಂಗಳೂರು: ನಗರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಭರದಿಂದ ಸಿದ್ಧತೆ ಏರ್ಪಟಿದ್ದು, ಈ ಸಂಭ್ರಮದ ನಡುವೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಪ್ರಮುಖವಾಗಿ ಮಹಿಳೆಯರು ಮತ್ತು ಮಕ್ಕಳ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಬರೊಬ್ಬರಿ 37 ವುಮೆನ್ ಸೇಫ್ಟಿ ಐಲ್ಯಾಂಡ್ಸ್ (ಮಹಿಳಾ ಸುರಕ್ಷತಾ ವಲಯಗಳನ್ನು) ನಿರ್ಮಿಸಲಾಗಿದೆ.
ಸೆಲೆಬ್ರೇಷನ್ ನಡೆಯುವ ಪ್ರತಿ ರಸ್ತೆಗೆ ಎರಡರಿಂದ ಮೂರು ವುಮೆನ್ ಸೇಫ್ಟಿ ಐಲ್ಯಾಂಡ್ಸ್ ನಿರ್ಮಿಸಲಾಗಿದ್ದು, ಪ್ರತೀ ಐಲ್ಯಾಂಡ್ ನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಪ್ರಥಮ ಚಿಕಿತ್ಸಾ ಪರಿಕರಗಳು, ಕುಡಿಯುವ ನೀರು ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಹೆಚ್ಚು ಜನದಟ್ಟಣೆ ಇರುವ ಜಾಗಗಳಲ್ಲಿ ಮತ್ತಷ್ಟು ಸೇಫ್ಟಿ ಐಲ್ಯಾಂಡ್ಸ್ ಹೆಚ್ಚಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಲ್ಲದೇ ಎಂ.ಜಿ ರಸ್ತೆ , ಬ್ರಿಗೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ನಲ್ಲಿ 34 ವೀಕ್ಷಣಾ ಗೋಪುರಗಳನ್ನ ನಿರ್ಮಾಣ ಮಾಡಲಾಗಿದೆ. ಸಂಜೆಯಿಂದಲೇ ಗೋಪುರಗಳ ಮೇಲೆ ನಿಂತು ಪ್ರತಿಯೊಬ್ಬರ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿವೆ.
ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ: ಸಿಲಿಕಾನ್ ಸಿಟಿಯ ಹೋಟೆಲ್ಸ್, ಪಬ್, ಬಾರ್ & ರೆಸ್ಟೋರೆಂಟ್ಗಳಲ್ಲಿ ತುಸು ಜೋರಾಗಿಯೇ ಇಂದು ಜನ ಸೇರುವ ನಿರೀಕ್ಷೆಯಿದೆ. ಆದ್ದರಿಂದ ಸೂಕ್ತ ಭದ್ರತೆಗೆ ಬೆಂಗಳೂರು ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಪಾರ್ಟಿ ಮೂಡ್ನಲ್ಲಿದ್ದವರು ಟೆರೆಸ್ ಮೇಲೆ ಹೋಗುವಂತಿಲ್ಲ. ಮದ್ಯಪಾನದ ಅಮಲಿನಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಗಳೂ ಸಹ ಇರುವುದರಿಂದ ಓಪನ್ ಟೆರೆಸ್ಗಳ ಕಡೆ ಯಾರು ಹೋಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪಬ್, ಹೋಟೆಲ್, ಬಾರ್ ರೆಸ್ಟೋರೆಂಟ್ಗಳ ಮಾಲೀಕರಿಗೆ ಮೌಖಿಕವಾಗಿ ಸೂಚನೆ ನೀಡಲಾಗಿದೆ.
ಟೆರೇಸ್ ಮೇಲೆ ಹೋಗುವ ಬಾಗಿಲುಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಒಂದು ವೇಳೆ, ಟೆರೇಸ್ ನಲ್ಲಿ ಪಾರ್ಟಿ ಹಾಲ್ ಗಳಿದ್ದರೆ ಅಗತ್ಯ ಸುರಕ್ಷತಾ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಮಾಲೀಕರಿಗೆ ಸೂಚಿಸಲಾಗಿದೆ. ಹೊಸ ವರ್ಷಾಚರಣೆ ಮತ್ತು ವೀಕೆಂಡ್ ಹಿನ್ನೆಲೆ ಸಿಟಿ ರೌಂಡ್ಸ್ ಹಾಕಿದ ನೆಲಮಂಗಲ ಪೊಲೀಸರು ಹೈವೇ ಡಾಬಾ ರೆಸ್ಟೋರೆಂಟ್ಗಳ ಮಾಲೀಕರಿಗೆ ಎಚ್ಚರಿಕೆಯನ್ನ ನೀಡಿದ್ದಾರೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೂ ಅಗತ್ಯ ಕ್ರಮ ತೆಗೆದುಕೊಂಡಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆ ಮತ್ತು ಮದ್ಯದ ಪಾರ್ಟಿ ಮಾಡುವ ಬೆಂಗಳೂರು ಹೊರವಲಯದ ನೆಲಮಂಗಲ ಸುತ್ತಮುತ್ತಲಿನ ಡಾಬಾ ಮತ್ತು ರೆಸ್ಟೋರೆಂಟ್ಗಳಿಗೆ ಲಗ್ಗೆ ಇಡುತ್ತಾರೆ. ಒಮ್ಮೆಲೇ ಹೆದ್ದಾರಿ ಡಾಬಾಗಳಿಗೆ ಜನ ಬರುವುದರಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ. ಅಹಿತಕರ ಘಟನೆ ತಡೆಯುವ ಹಿನ್ನೆಲೆ ಟೌನ್ ಇನ್ಸ್‌ಪೆಕ್ಟರ್ ಶಶಿಧರ್ ನೇತೃತ್ವದ ಪೊಲೀಸರ ತಂಡ ಡಾಬಾ ಮತ್ತು ರೆಸ್ಟೋರೆಂಟ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಾಫಿಕ್: ಕ್ರಿಸ್‌ಮಸ್ ಹಾಲಿಡೇ, ನ್ಯೂ ಇಯರ್ ಹಾಗೂ ವೀಕೆಂಡ್ ಹಿನ್ನೆಲೆ ರಜೆ ಇರುವದರಿಂದ ಬೆಂಗಳೂರಿಗರು ನಗರ ತೊರೆದು ತಮ್ಮ ಊರುಗಳಿಗೆ ಹೋಗುತ್ತಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 48, ಬೆಂಗಳೂರು ತುಮಕೂರು ರಸ್ತೆ, ರಾಷ್ಟ್ರೀಯ ಹೆದ್ದಾರಿ 75 ರ ಮಂಗಳೂರು ರಸ್ತೆಯಲ್ಲಿ ವಾಹನಗಳ ದಟ್ಟನೆ ಉಂಟಾಗಲಿದೆ. ಲಭ್ಯ ಇರುವ ಸಿಬ್ಬಂದಿಗಳಿಂದಲೇ ಸಂಚಾರ ನಿಯಂತ್ರಣ ಮಾಡಲು ಪೊಲೀಸರು ಸನ್ನದ್ಧರಾಗಿದ್ದಾರೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂಓದಿ:ಸಚಿವ ಸ್ಥಾನಕ್ಕಾಗಿ ಸಿಎಂ ದುಂಬಾಲು ಬಿದ್ದ ಜಾರಕಿಹೊಳಿ, ಯೋಗೇಶ್ವರ್: ಅಮಿತ್ ಶಾ ಭೇಟಿ ಮಾಡಿದ ರಾಜ್ಯ ನಾಯಕರು