ಬೆಂಗಳೂರು: ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಕೋವಿಡ್ ಚಿಕಿತ್ಸೆಗೆ ಬೆಡ್ ನೀಡದ ಖಾಸಗಿ ಆಸ್ಪತ್ರೆಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಂದೂ ಕೂಡಾ ಈ ಕುರಿತು ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ನಿನ್ನೆ ಮತ್ತು ಇವತ್ತು ಬೆಳಗ್ಗೆ ಖಾಸಗಿ ಆಸ್ಪತ್ರೆಗಳ ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಸಾಕಷ್ಟು ಗೊಂದಲಗಳಿರುವುದು ಗೊತ್ತಾಗಿದೆ ಎಂದರು.
ಶೇಕಡಾ 50 ರಷ್ಟು ಬೆಡ್ ಮೀಸಲು ನಿಯಮ ಸಹ ಉಲ್ಲಂಘನೆಯಾಗಿತ್ತು. 2 ಆಸ್ಪತ್ರೆಗಳಿಂದ ನಿಯಮಗಳ ಉಲ್ಲಂಘನೆಯಾಗಿದ್ದು, ಅವರಿಗೆ ತಿಳಿ ಹೇಳಲಾಗಿದೆ. ಭಾನುವಾರದಂದು ಸರ್ಕಾರ ಹೊಸ ಆದೇಶ ಹೊರಡಿಸಿದೆ. 30 ಆಸ್ಪತ್ರೆಗಳ ಪಟ್ಟಿ ಬಿಡುಗಡೆಯಾಗಿದೆ. ಏಳು ಹೊಸ ತಂಡಗಳ ರಚನೆ ಮಾಡಿ, ಒಬ್ಬ ಐಎಎಸ್ , ಇಬ್ಬರು ಐಪಿಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಿಯಮ ಪಾಲಿಸದೆ, ಬೆಡ್ ಮೀಸಲಿಡದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.
ಖಾಸಗಿ ಆಸ್ಪತ್ರೆಗಳ ಬೆಡ್ ಲಭ್ಯತೆ ಬಗ್ಗೆ ಇವತ್ತಿನ ಸಭೆಯಲ್ಲಿ ಚರ್ಚೆ ನಡೆದಿದ್ದು, ಸುವರ್ಣ ಆರೋಗ್ಯ ಟ್ರಸ್ಟ್, ಬೆಡ್ಗಳ ಮೀಸಲು ಬಗ್ಗೆ ಅಪ್ಡೇಟ್ ಮಾಡುತ್ತದೆ. ಪಾಲಿಕೆ ವೆಬ್ ಸೈಟ್ನಲ್ಲೂ ಅಪ್ಡೇಟ್ ಆಗಲಿದೆ ಎಂದರು. ಶೇ.95 ರಿಂದ 90 ರಷ್ಟು ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಈಗ ಗುಣಲಕ್ಷಣ ಇರುವವರು, ಅಗತ್ಯ ಚಿಕಿತ್ಸೆ ಬೇಕಾದವರನ್ನು ಮಾತ್ರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.
ಬೆಂಗಳೂರಿನ ಒಟ್ಟು ಕೋವಿಡ್ ಹಾಸಿಗೆಗಳ ಪೈಕಿ ಶೇ.49 ರಷ್ಟು ಭರ್ತಿಯಾಗಿವೆ. ಒಟ್ಟು 16,257 ಹಾಸಿಗೆಗಳ ಪೈಕಿ 5,686 ಬೆಡ್ಗಳು ಭರ್ತಿಯಾಗಿವೆ. ಭರ್ತಿಯಾಗಿರುವ ಹಾಸಿಗೆಗಳ ಪೈಕಿ ವಿಶೇಷ ನಿಗಾ ಘಟಕದ ಹಾಸಿಗೆಗಳೇ ಹೆಚ್ಚು. ಈಗ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 5,559 ಹಾಸಿಗೆಗಳು ಖಾಲಿ ಇವೆ. ಸರ್ಕಾರ HDU, CCU, ICU ನಂತ ವಿಶೇಷ ನಿಗಾ ಹಾಸಿಗೆಗಳನ್ನು ಹೆಚ್ಚಿಸಬೇಕಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ 853 ಕೋವಿಡ್ ಹಾಸಿಗೆ ಪೈಕಿ 503 ಹಾಸಿಗೆಗಳು ಭರ್ತಿಯಾಗಿವೆ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ 368 ಕೋವಿಡ್ ಹಾಸಿಗೆ ಖಾಲಿ ಇವೆ. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 769 ಕೋವಿಡ್ ಹಾಸಿಗೆ ಪೈಕಿ 740 ಹಾಸಿಗೆಗಳು ಭರ್ತಿಯಾಗಿವೆ. ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಕೇವಲ 29 ಕೋವಿಡ್ ಹಾಸಿಗೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದರು.
ಖಾಸಗಿ ಆಸ್ಪತ್ರೆಗಳಲ್ಲಿ 5,045 ಕೋವಿಡ್ ಹಾಸಿಗೆಗಳ ಪೈಕಿ 828 ಹಾಸಿಗೆ ಭರ್ತಿಯಾಗಿದ್ದು, 4,013 ಕೋವಿಡ್ ಹಾಸಿಗೆ ಖಾಲಿ ಇವೆ. ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 2140 ಕೋವಿಡ್ ಹಾಸಿಗೆಗಳ ಪೈಕಿ 1392 ಹಾಸಿಗೆಗಳು ಭರ್ತಿಯಾಗಿದ್ದು, 748 ಖಾಲಿ ಇವೆ. ಕೋವಿಡ್ ಕೇರ್ ಕೇಂದ್ರಗಳ 2,624 ಹಾಸಿಗೆಗಳ ಪೈಕಿ 2223 ಹಾಸಿಗೆಗಳು ಭರ್ತಿಯಾಗಿ ಇನ್ನೂ 401 ಹಾಸಿಗೆ ಖಾಲಿ ಇವೆ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.