ಬೆಂಗಳೂರು: ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಪಿ.ದೀಪಕ್ ಮತ್ತು ಅವರ ತಂಡ ಬೆಂಗಳೂರಿನ ಹೊರವಲಯದ ಹೊಸ ಜಾತಿಯ ಬಿಲಗಪ್ಪೆಯನ್ನ ಕಂಡು ಹಿಡಿದಿದ್ದಾರೆ.
ಹೊಸ ಸಂಶೋಧನೆಗೆ ಭಾರತೀಯ ಪ್ರಾಣಿ ಸಂಸ್ಥಾನದ ವಿಜ್ಞಾನಿಯಾದ ಡಾ. ಕೆ. ಪಿ. ದಿನೇಶ್, ಫ್ರಾನ್ಸ್ ನ್ಯಾಷನಲ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ವಿಜ್ಞಾನಿಯಾದ ಡಾ. ಅನೈಮರಿ ಓಕ್ತರ್, ಬೆಂಗಳೂರಿನ ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ (IISc) ಪ್ರೊಫೆಸರ್ ಡಾ. ಕಾರ್ತಿಕ್ ಶಂಕರ್, ಭಾರತೀಯ ಪ್ರಾಣಿ ಸಂಸ್ಥಾನದ ವಿಜ್ಞಾನಿ ಡಾ.ಬಿ.ಎಚ್.ಚನ್ನಕೇಶವಮೂರ್ತಿ ಹಾಗೂ ಮೈಸೂರು ಯುವರಾಜ ಕಾಲೇಜಿನ ಪ್ರೊಫೆಸರ್ ಜೆ.ಎಸ್.ಅಶಾದೇವಿಯವರು ಜಂಟಿಯಾಗಿ ಸೇರಿ ಹೊಸ ಜಾತಿಯ ಬಿಲ ಕಪ್ಪೆಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದಲ್ಲಿ ಉಭಯಚರ ಆವಿಷ್ಕಾರಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ, ಹೆಚ್ಚಿನ ಜಾತಿಗಳ ಅವಿಷ್ಕಾರಗಳು ಜೀವ ವೈವಿಧ್ಯತೆಯ ಹಾಟ್ಬಾಟ್ ತಾಣಗಳಿಂದ ಅಥವಾ ಹಸಿರು ಹೊದಿಕೆಯುಳ್ಳ ಅರಣ್ಯ ಪ್ರದೇಶಗಳಿಂದ ಆಗುತ್ತಿದೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕರ್ನಾಟಕದ ಡೆಕ್ಕನ್ ಪ್ರಸ್ಥಭೂಮಿ ಭಾಗಗಳಲ್ಲಿ ಉಭಯಚರಗಳನ್ನು ದಾಖಲಿಸುವ ಪ್ರಯತ್ನದಲ್ಲಿ, ಪಿ. ದೀಪಕ್ ಮತ್ತು ತಂಡವು ನಗರದ ಹೊರವಲಯದಿಂದ ಹೊಸ ಜಾತಿಯ ಬಿಲಗಪ್ಪೆಯನ್ನು ಕಂಡುಹಿಡಿದ್ದಿದಾರೆ.
ಹೊಸ ಪ್ರಭೇದವನ್ನು ದಕ್ಷಿಣ ಏಷ್ಯಾದಾದ್ಯಂತ ಕಂಡುಬರುವ ಸ್ಪೇರೋಥಿಕಾ (Sphaerotheca) ಪ್ರಭೇದದ ಕಪ್ಪೆಗಳೊಂದಿಗೆ ಬಾಹ್ಯವಿಜ್ಞಾನ ಮತ್ತು ಆನುವಂಶಿಕ (genetic) ವ್ಯತ್ಯಾಸಗಳ ಆಧಾರದ ಮೇಲೆ ವಿವರಿಸಲಾಗಿದೆ. ಅಧ್ಯಯನದ ಸಂಶೋಧನಾ ಅವಿಷ್ಕಾರಗಳನ್ನು ಅಂತರರಾಷ್ಟ್ರೀಯ ಜರ್ನಲ್ ಆದ ನ್ಯೂಜಿಲ್ಯಾಂಡ್ ಝಟಾಕ್ಷಾದಲ್ಲಿ (Zootaxa) ಪ್ರಕಟಿಸಲಾಗಿದೆ.