ಬೆಂಗಳೂರು: ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೊಳಿಸಲು ವಿವಿಧ ಸರ್ಕಾರಗಳು ಯತ್ನಿಸುತ್ತಲೇ ಇವೆ. ಆದರೆ ಅದು ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿಲ್ಲ. ಇದೀಗ ಮತ್ತೆ ಬಿಜೆಪಿ ಸರ್ಕಾರ ಹೊಸ ಮರಳು ನೀತಿಯ ಮಂತ್ರ ಪಠಿಸುತ್ತಿದೆ.
ಅಕ್ರಮ ಮರಳುಗಾರಿಕೆ ರಾಜ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಅದರ ಲಾಬಿ ಎಷ್ಟಿದೆ ಎಂದರೆ ಸರ್ಕಾರ, ಅಧಿಕಾರಿ ವರ್ಗಗಳ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ವಿಸ್ತರಿಸಿದೆ. ಈಗಾಗಲೇ ಹಲವು ಸರ್ಕಾರಗಳು ಸಾರ್ವಜನಿಕರಿಗೆ ಅಗ್ಗದ ದರದಲ್ಲಿ ಸರಳವಾಗಿ ಗುಣಮಟ್ಟದ ಮರಳು ಸಿಗುವ ನಿಟ್ಟಿನಲ್ಲಿ ಹೊಸ ಮರಳು ನೀತಿ ತರಲು ಚಿಂತನೆ ನಡೆಸಿದೆ. ಆದರೆ, ಹೊಸ ಮರಳು ನೀತಿ ಘೋಷಣೆಗಷ್ಟೇ ಸೀಮಿತವಾಗಿದ್ದು, ಕಾರ್ಯರೂಪಕ್ಕೆ ಬರಲು ಸಾಧ್ಯವಾಗಿಲ್ಲ.
ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮತ್ತೆ ಮರಳು ನೀತಿ ಜಾರಿಗೆ ತರುವ ಬಗ್ಗೆ ಹೇಳಿಕೊಂಡಿದೆ. ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಅವರು ಹೊಸ ಮರಳು ನೀತಿ ಜಾರಿಗೆ ತರುವ ಬಗ್ಗೆ ಹೇಳಿದ್ದಾರೆ. ಅದಕ್ಕೂ ಮುಂಚೆ ಹಿಂದಿನ ಸರ್ಕಾರಗಳು ಹೊಸ ಮರಳು ನೀತಿಯ ಮಂತ್ರ ಪಠಿಸಿದ್ದವು.
ಈ ಹಿಂದಿನ ಸರ್ಕಾರಗಳ ಮರಳು ನೀತಿ ಮಂತ್ರ: ಸಿದ್ದರಾಮಯ್ಯ ಸರ್ಕಾರ ಇದ್ದಾಗ ರಾಜ್ಯದಲ್ಲಿ ಮರಳು ನೀತಿ ತರಲು ನಿರ್ಧರಿಸಿದ್ದರು. ಅದರಂತೆ 2014ರಲ್ಲಿ ಮರಳು ನೀತಿಯನ್ನು ಪ್ರಕಟಿಸಿದ್ದರು.
ಅದರಂತೆ ಅಕ್ರಮ ಮರಳುಗಾರಿಕೆ ನಿಯಂತ್ರಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣೆ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿತ್ತು. ಜಿಲ್ಲಾ ಸಮಿತಿಗಳಿಗೆ ಮರಳು ದರ ನಿಗದಿ ಮಾಡುವ ಅಧಿಕಾರ ನೀಡಲಾಗಿದ್ದರೆ, ತಾಲೂಕು ಸಮಿತಿಗಳು ಮರಳು ಬ್ಲಾಕ್ ಗಳನ್ನು ಗುರುತಿಸಿ, ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಕರೆದು ಮರಳುಗಾರಿಕೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಈ ಹೊಸ ಮರಳು ನೀತಿ ಅನುಕೂಲಕಾರಿಯಾಗಿರಲಿಲ್ಲ.
ಬಳಿಕ ಬಂದ ಮೈತ್ರಿ ಸರ್ಕಾರವೂ ಹೊಸ ಮರಳು ನೀತಿ ಜಾರಿಗೊಳಿಸುವುದಾಗಿ ಘೋಷಣೆ ಮಾಡಿತ್ತು. ಆ ನಿಟ್ಟಿನಲ್ಲಿ ಅಂದಿನ ಡಿಸಿಎಂ ಪರಮೇಶ್ವರ್ ನೇತೃತ್ವದ ಸಂಪುಟ ಉಪಸಮಿತಿಯನ್ನೂ ರಚಿಸಲಾಗಿತ್ತು. ಇನ್ನು ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್, ತಮಿಳುನಾಡು ಮಾದರಿ ಮರಳುಗಾರಿಕೆಯ ಅಧ್ಯಯನ ನಡೆಸಲು ಈ ಐದು ರಾಜ್ಯಗಳಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿತ್ತು.
ಬಳಿಕ ತೆಲಂಗಾಣ ಮಾದರಿ ಮರಳು ನೀತಿಯನ್ನು ಜಾರಿಗೆ ತರಲು ಮೈತ್ರಿ ಸರ್ಕಾರ ಚಿಂತನೆ ನಡೆಸಿತ್ತು. ಈ ಸಂಬಂಧ ಸಂಪುಟ ಉಪಸಮಿತಿ ಮುಂದೆ ಹಲವು ಬಾರಿ ಚರ್ಚೆಯೂ ನಡೆದಿತ್ತು. ಆದರೆ ಅಂತಿಮ ತೀರ್ಮಾನ ಕೈಗೊಳ್ಳಲು ವಿಫಲವಾಗಿತ್ತು.
ಆಂಧ್ರಕ್ಕೆ ಅಧ್ಯಯನ ತಂಡ: ಹೊಸ ಬಿಜೆಪಿ ಸರ್ಕಾರ ಇದೀಗ ಆಂಧ್ರ ಮಾದರಿಯ ಮರಳು ನೀತಿ ಜಾರಿಗೆ ತರಲು ಒಲವು ತೋರಿದೆ. ಈ ಸಂಬಂಧ ಆಂಧ್ರಪ್ರದೇಶಕ್ಕೆ ಅಧ್ಯಯನ ತಂಡ ಕಳುಹಿಸಲು ನಿರ್ಧರಿಸಿದೆ.
ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ಆಂಧ್ರ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳಿಗೆ ಅಧ್ಯಯನ ತಂಡ ಕಳುಹಿಸಿ ಮರಳು ನೀತಿ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿತ್ತು. ಈಗ ಮತ್ತೆ ಬಿಜೆಪಿ ಸರ್ಕಾರ ಆಂಧ್ರಕ್ಕೆ ಹೊಸ ಅಧ್ಯಯನ ತಂಡವೊಂದನ್ನು ಕಳುಹಿಸಿ ವರದಿ ಸಿದ್ಧಪಡಿಸಲು ಸೂಚಿಸಿದೆ. ಹಾಗಾದರೆ ಈ ಮುಂಚಿನ ಅಧ್ಯಯನ ತಂಡದ ವರದಿ ಏನಾಗಿದೆ ಎಂಬ ಅನುಮಾನ ಮೂಡಿದೆ.
ಮರಳುಗಾರಿಕೆ ಅಧ್ಯಯನ ಹೆಸರಲ್ಲಿ ಪದೇ ಪದೆ ನೆರೆ ರಾಜ್ಯಗಳಿಗೆ ಅಧ್ಯಯನ ತಂಡವನ್ನು ಕಳುಹಿಸಿ, ರಾಜ್ಯದ ಬೊಕ್ಕಸದ ಹಣ ಪೋಲು ಮಾಡಲಾಗುತ್ತಿದೆ ಎಂಬ ಕೂಗು ಕೇಳಿ ಬಂದಿದೆ. ಅಧಿಕಾರಿಗಳು ಅಧ್ಯಯನ ಹೆಸರಲ್ಲಿ ಪ್ರವಾಸ ಕೈಗೊಳ್ಳುತ್ತಾರೆಯೇ ಹೊರತು ಬೇರೆ ಯಾವುದೇ ಲಾಭವಾಗುತ್ತಿಲ್ಲ.
ಅಕ್ರಮ ಮರಳುಗಾರಿಕೆ ಹಾವಳಿ: ರಾಜ್ಯದಲ್ಲಿ ವ್ಯಾಪಕ ಅಕ್ರಮ ಮರಳುಗಾರಿಕೆ ಮುಂದುವರಿಯುತ್ತಲೇ ಇದೆ. ಅದರ ನಿಯಂತ್ರಣ ಮಾತ್ರ ಮರೀಚಿಕೆಯಾಗೇ ಉಳಿದಿದೆ. ರಾಜ್ಯದಲ್ಲಿ ಸುಮಾರು 45 ದಶಲಕ್ಷ ಮೆಟ್ರಿಕ್ ಟನ್ ಮರಳು ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಸುಮಾರು 65 ದಶಲಕ್ಷ ಮೆಟ್ರಿಕ್ ಟನ್ ಮರಳಿಗೆ ಬೇಡಿಕೆ ಇದೆ. 2015-2019ರವರೆಗೆ ರಾಜ್ಯಾದ್ಯಂತ ಸುಮಾರು 25,000 ಅಕ್ರಮ ಮರಳುಗಾರಿಕೆ ಪ್ರಕರಣ ದಾಖಲಿಸಲಾಗಿದ್ದು, 11,000 ಎಫ್ ಐಆರ್ ದಾಖಲಿಸಾಗಿದೆ.
ರಾಜ್ಯ ಸರ್ಕಾರ ಅಧಿಕೃತ ಮರಳು ಬ್ಲಾಕ್ ಗಳಿಂದ ವಾರ್ಷಿಕ ಸುಮಾರು 185 ಕೋಟಿ ರೂ. ರಾಜ ಧನವನ್ನು ಸಂಗ್ರಹಿಸುತ್ತಿದೆ. ಅಕ್ರಮ ಮರಳುಗಾರಿಕೆಯಿಂದ ವಾರ್ಷಿಕ ಸುಮಾರು 230 ಕೋಟಿ ರೂ. ನಷ್ಟ ಅನುಭವಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಮರಳು ಪ್ರಕರಣಗಳು(2015-18):
- ಅಕ್ರಮ ಮರಳುಗಾರಿಕೆ -1,530 ಪ್ರಕರಣ
- ಅಕ್ರಮ ಮರಳು ಸಾಗಣಿಕೆ -18,510 ಪ್ರಕರಣ
- ಅಕ್ರಮ ಮರಳು ಸಂಗ್ರಹ -435 ಪ್ರಕರಣ
- ಫಿಲ್ಟರ್ ಮರಳು -304 ಪ್ರಕರಣ
- ಒಟ್ಟು ಎಫ್ ಐಆರ್ ದಾಖಲು -9,600
- ದಂಡದ ಮೊತ್ತ -44.15 ಕೋಟಿ ರೂ.