ಬೆಂಗಳೂರು: ರೂಪಾಂತರಿತ ಕೋವಿಡ್ 19 ವೈರಾಣು ಹಿನ್ನೆಲೆ ನಾಳೆಯಿಂದ ಇಂಗ್ಲೆಂಡ್, ನೆದರ್ಲೆಂಡ್ಸ್ ಮತ್ತು ಡೆನ್ಮಾರ್ಕ್ ನಿಂದ ಬರುವ ವಿಮಾನವನ್ನು ನಿಷೇಧಿಸಲಾಗಿದ್ದು, ಅಲ್ಲಿಂದ ಈಗಾಗಲೇ ರಾಜ್ಯಕ್ಕೆ ಬಂದಿರುವ ಪ್ರಯಾಣಿಕರನ್ನು ಒಂದು ವಾರ ಐಸೋಲೇಷನ್‌ನಲ್ಲಿ ಇರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಗ್ಲೆಂಡ್ ನಲ್ಲಿ ಕೊರೊನಾ ರೂಪಾಂತರ ವೈರಾಣು ಕಾಣಿಸಿಕೊಂಡಿದೆ. ಇದರ ರೋಗಲಕ್ಷಣ ಕೋವಿಡ್ ತರನೇ ಇದೆ. ಆದರೆ, ಹರಡುವ ಪ್ರಮಾಣ ಹೆಚ್ಚಿದೆ. ಕೇಂದ್ರ ಸರ್ಕಾರ ಇದನ್ನ ನಮ್ಮ ಗಮನಕ್ಕೆ ತಂದಿದೆ. ಆ ಸಂಬಂಧ ಪತ್ರವನ್ನೂ ನಮ್ಮ ಆರೋಗ್ಯ ಇಲಾಖೆಗೆ ಬರೆದಿದೆ ಎಂದರು.
ಹೊಸ ಕೋವಿಡ್ ವೈರಸ್ ಬಗ್ಗೆ ಸಚಿವ ಸುಧಾಕರ್ ಮಾಹಿತಿ
ಬ್ರಿಟನ್ ನಿಂದ ನಿನ್ನೆ ಏರ್ ಇಂಡಿಯಾದಿಂದ 246 ಬಂದಿದ್ದರು. ಬ್ರಿಟಿಷ್ ಏರ್ ವೇಸ್ನಲ್ಲಿ 291 ಜನ ಬಂದಿದ್ದಾರೆ. ಏರ್ ಇಂಡಿಯಾದಿಂದ 89 ಜನರು ಟೆಸ್ಟ್ ಮಾಡಿಸದೇ ಬಂದಿದ್ದಾರೆ. ಬ್ರಿಟಿಷ್ ಏರ್ ವೇಸ್ ನಿಂದ 49 ಜನರು ಟೆಸ್ಟ್ ಮಾಡಿಸದೆ ಬಂದಿದ್ದಾರೆ. ಒಟ್ಟು 138 ಜನರು ಕೋವಿಡ್ ನೆಗೆಟಿವ್ ಸರ್ಟಿಫಿಕೆಟ್ ಇಲ್ಲದೇ ಕರ್ನಾಟಕಕ್ಕೆ ಬಂದಿದ್ದಾರೆ. ಈ 138 ಜನರನ್ನ ಟ್ರೇಸ್ ಮಾಡಿ ಟೆಸ್ಟ್ ಮಾಡುತ್ತೇವೆ. ಇವರನ್ನು ಪತ್ತೆ ಹಚ್ಚಿ ಆರ್ ಟಿ ಪಿಸಿಆರ್ ಟೆಸ್ಟ್ ಮಾಡಿಸಲಾಗುವುದು ಎಂದರು.
ಓದಿ: ಮೊದಲ ಹಂತದ ಗ್ರಾಪಂ ಚುನಾವಣೆಗೆ ನಾಳೆ ಮತದಾನ: ಕಣದಲ್ಲಿ 1,17,383 ಅಭ್ಯರ್ಥಿಗಳು
ರಾಜ್ಯದಲ್ಲಿ ಹೊಸ ವಂಶವಾಹಿ ವೈರಸ್ ಇಲ್ಲಿಯವರೆಗೆ ಪತ್ತೆಯಾಗಿಲ್ಲ. ವಿದೇಶದಿಂದ ಬರೋರಿಗೆ 7 ದಿನ ಹೋಮ್ ಐಸೋಲೇಷನ್ ಕಡ್ಡಾಯವಾಗಿದೆ. ಕೋವಿಡ್ ರೋಗ ಲಕ್ಷಣಗಳೇ ಹೊಸದರಲ್ಲೂ ಇವೆ. ಹೊಸ ವೈರಾಣುವಿನಲ್ಲೂ ಕೊರೊನಾ ತೀವ್ರತೆಯೇ ಇದೆ. ಆದರೆ, ಹೊಸ ವೈರಾಣು ಹೆಚ್ಚು ಹರಡುವಿಕೆ ಹೊಂದಿದೆ. ಹೀಗಾಗಿ ಯಾರೂ ಭಯ ಪಡುವ ಅಗತ್ಯ ಇಲ್ಲ. ಆದರೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಪ್ರಸ್ತುತ ಅಭಿವೃದ್ಧಿ ಪಡಿಸಿರುವ ಲಸಿಕೆಯೇ ಈ ರೂಪಾಂತರಿತ ವೈರಸ್ಗೆ ಬಳಸಬಹುದು ಎಂದು ತಜ್ಞರು ಹೇಳಿದ್ದಾರೆ ಎಂದು ತಿಳಿಸಿದರು.
ಹೊಸ ರೂಪಾಂತರಿತ ವೈರಸ್ ಪತ್ತೆ ಹಿನ್ನೆಲೆ ಶಾಲಾ ಕಾಲೇಜು ಪ್ರಾರಂಭಿಸುವ ಸಂಬಂಧ ಆದಷ್ಟು ಬೇಗ ಅಧಿಕಾರಿಗಳ ಜೊತೆ ಸಭೆ ನಡೆಸ್ತೇವೆ. ಹೊಸ ವೈರಾಣುವಿನ ಹರಡುವಿಕೆ ಸಂಬಂಧ ಸಭೆ ನಡೆಸ್ತೇವೆ ನಂತರ ನಿರ್ಧಾರ ತೆಗೆದುಕೊಳ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.