ಬೆಂಗಳೂರು: ನಗರದಲ್ಲಿ ಸಂಚಾರಿ ಪೊಲೀಸರ ಕಾರ್ಯಕ್ಷಮತೆ ಹೆಚ್ಚಿಸಲು ಆಧುನಿಕ ತಂತ್ರಜ್ಞಾನ - ಹವಾನಿಯಂತ್ರಿತ ಸಂಚಾರಿ ಕಿಯೋಸ್ಕ್ಗಳ ಸೌಲಭ್ಯ ಒದಗಿಸಲಾಗಿದೆ.
ಬಿಬಿಎಂಪಿ ಮತ್ತು ಸೈನ್ ಪೋಸ್ಟ್ ಖಾಸಗಿ ಸಂಸ್ಥೆಯ ಸಹಯೋಗದಲ್ಲಿ ಕಿಯೋಸ್ಕ್ಗಳ ಅಳವಡಿಕೆ ಮಾಡಲಾಗಿದ್ದು, ಇದಕ್ಕೆ ಟ್ರಾಫಿಕ್ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ರಾಫಿಕ್ ಪೊಲೀಸರು ಪ್ರತಿನಿತ್ಯ ಬಿಸಿಲು, ಮಳೆ ಎನ್ನದೇ ಕೆಲಸ ನಿರ್ವಹಿಸುತ್ತಾರೆ. ಹಾಗೆಯೇ ಒಮ್ಮೊಮ್ಮೆ ವಾಹನ ಸವಾರರು ನಮ್ಮ ಮೇಲೆ ಹಲ್ಲೆ ಮಾಡುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ 360 ಡಿಗ್ರಿ ವೀಕ್ಷಣೆಯ ಫೈಬರ್ ಗ್ಲಾಸ್ ವ್ಯವಸ್ಥೆಯಲ್ಲಿ ವೀಕ್ಷಣೆ ಮಾಡಿ ಫೈನ್ ಹಾಕಬಹುದು. ಹಾಗೆ ಕಿಯೋಸ್ಕ್ಗಳಲ್ಲಿ ಫ್ಯಾನ್, LED ಲೈಟ್ಸ್, ಡಿಜಿಟಲ್ ಡಿಸ್ಪ್ಲೇ, ಮೈಕ್, ಸುಸಜ್ಜಿತ ರೋಲಿಂಗ್ ಚೇರ್, ಅಗ್ನಿ ದುರಂತ ತಡೆಯೋ ಯಂತ್ರ ಇದ್ದು, ಬಹಳ ಪ್ರಯೋಜನಕಾರಿಯಾಗಲಿದೆ ಎಂದು ಟ್ರಾಫಿಕ್ ಪೊಲೀಸರೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಗರದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬೆಳೆಯುತ್ತಿರುವ ಬೆಂಗಳೂರು ಮಹಾನಗರಕ್ಕೆ ಎಲ್ಲ ರೀತಿಯ ಆಧುನಿಕ ತಂತ್ರಜ್ಞಾನ ಬೇಕು, ಸದ್ಯ ಅಂತಹುದ್ದೇ ತಂತ್ರಜ್ಞಾನ ನಮ್ಮ ಪೊಲೀಸ್ ಇಲಾಖೆಗೆ ಸಿಕ್ಕಿದೆ. ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಇದು ಬಹಳಷ್ಟು ಅನುಕೂಲಕರ, ಹಾಗೆ ಇದನ್ನ ಟ್ರಾಫಿಕ್ ಆಯುಕ್ತ ರವಿಕಾಂತೇಗೌಡ ಅವರ ಪ್ಲಾನ್ ಆಧಾರದ ಮೇಲೆ ಬಿಬಿಎಂಪಿ ನಿರ್ಮಿಸಿದೆ ಎಂದು ತಿಳಿಸಿದರು.