ಬೆಂಗಳೂರು: ರಾಜ್ಯದಲ್ಲಿ ಭೀಕರ ನೆರೆಹಾನಿ ಸಂಭವಿಸಿರುವ ಸಮಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಯಾರೂ ಸಹ ರಾಜಕೀಯ ಮಾಡುವುದು ಸರಿಯಲ್ಲ. ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಮನವಿ ಮಾಡಿದ್ದಾರೆ.
ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಬಿಜೆಪಿ ಯುವ ಮೋರ್ಚಾ ವತಿಯಿಂದ ರವಾನಿಸಲಾಯಿತು. ಚಿಕ್ಕೋಡಿ ಮತ್ತು ಬೆಳಗಾವಿಗೆ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಾಹನಕ್ಕೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಚಾಲನೆ ನೀಡಿದರು. 100 ಕ್ವಿಂಟಾಲ್ ಅಕ್ಕಿ ಹಾಗೂ ಕುಡಿಯುವ ನೀರನ್ನು ಹೊತ್ತ ಲಾರಿ ಉತ್ತರ ಕರ್ನಾಟಕದ ಕಡೆ ಪ್ರಯಾಣ ಬೆಳೆಸಿತು. ನಂತರ ಮಲ್ಲೇಶ್ವರಂನಲ್ಲಿ ಇವರು ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ದೇಣಿಗೆ ಸಂಗ್ರಹ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಈಗ ನಾವು ನೂರು ಕ್ವಿಂಟಾಲ್ ಅಕ್ಕಿ ಮತ್ತು ಕುಡಿಯುವ ನೀರು ಕಳುಹಿಸುತ್ತಿದ್ದೇವೆ. ನೆರೆ ಸಂತ್ರಸ್ತರಿಗೆ ಬ್ಲಾಂಕೆಟ್ಗಳ ಅಗತ್ಯವಿದೆ ಜೊತೆಗೆ ಮನೆಗಳು ಸೋರುತ್ತಿವೆ. ಮುಚ್ಚಲು ಪ್ಲಾಸ್ಟಿಕ್ ಶೀಟ್ ಗಳ ಅಗತ್ಯವಿದೆ ಹಾಗಾಗಿ ಇಂದೂ ಸಹ ಬೆಂಗಳೂರಿನಲ್ಲಿ ಪಾದಯಾತ್ರೆ ಮೂಲಕ ಧನ ಸಂಗ್ರಹ ಹಾಗೂ ಅಗತ್ಯವಸ್ತುಗಳ ಸಂಗ್ರಹ ಮಾಡಿ ನೆರೆ ಸಂತ್ರಸ್ತರಿಗೆ ಕಳುಹಿಸುತ್ತೇವೆ ಎಂದರು.
ಒನ್ ಮ್ಯಾನ್ ಶೋ ಟೂ ಮ್ಯಾನ್ ಶೋ ಮುಖ್ಯವಲ್ಲ. ಸಿಎಂ ಯಡಿಯೂರಪ್ಪನವರು ತಾವೇ ಮುಂದೆ ನಿಂತು ಪರಿಹಾರ ಕಾಮಗಾರಿಗಳ ಉಸ್ತುವಾರಿ ನಡೆಸಿದ್ದಾರೆ. ಈ ಹಂತದಲ್ಲಿ ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸಬೇಕು. ನೆರೆ ಸಂತ್ರಸ್ತರಿಗೆ ನೆರವು ನೀಡುವ ಅಗತ್ಯವಿದೆ ಅದಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿದರು.