ಬೆಂಗಳೂರು: ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಸೇರಿದಂತೆ ನೈರ್ಮಲ್ಯದ ವಸ್ತುಗಳನ್ನು ಪೂರೈಸುವ ಶುಚಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ಆರೋಗ್ಯ ಇಲಾಖೆ ಆಯುಕ್ತರು ಆ.5ರ ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನಿರ್ದೇಶಿಸಿದೆ.
ಸರ್ಕಾರಿ ಶಾಲೆಗಳ ದುಸ್ಥಿತಿಗೆ ಸಂಬಂಧಿಸಿದಂತೆ ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾ.ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಈ ನಿರ್ದೇಶನ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶುಚಿ ಯೋಜನೆ ಅನುಷ್ಠಾನಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಳ್ಳಬೇಕಿದೆ ಎಂದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಯೋಜನೆ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡಲಾಗಿದೆ. ಆರ್ಥಿಕ ಇಲಾಖೆ ಅನುಮೋದನೆ ಹಾಗೂ ತಾಂತ್ರಿಕ ಸಮಿತಿ ಒಪ್ಪಿಗೆ ಸಿಕ್ಕಿದೆ. ಸರ್ಕಾರಿ ಸ್ವಾಮ್ಯದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಎಲ್)ದಿಂದಲೇ ವಸ್ತುಗಳನ್ನು ಖರೀದಿಸಬೇಕಿದೆ. ಎಲ್ಲವೂ ಸರ್ಕಾರದ ಹಂತದಲ್ಲೆ ಇರುವಾಗ ಯೋಜನೆ ಅನುಷ್ಠಾನಕ್ಕೆ ತೊಂದರೆ ಏನು, ಸಚಿವ ಸಂಪುಟದ ಮುಂದೆ ಮಂಡಿಸುವ ಅವಶ್ಯಕತೆ ಏನಿದೆ, ಅವಶ್ಯಕತೆ ಇದ್ದರೆ ಏಕೆ ಮಂಡಿಸಿಲ್ಲ. ಶುಚಿ ಯೋಜನೆಯನ್ನು ಕೇವಲ ಕಾಗದದಲ್ಲಿ ಉಳಿಸಿದ್ದೀರಾ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಅಲ್ಲದೆ ಸರ್ಕಾರದ ಇಂತಹ ನಿರ್ಲಕ್ಷದಿಂದ ಬಡ ವಿದ್ಯಾರ್ಥಿನಿಯರು ನಿರ್ದಿಷ್ಟ ದಿನಗಳಲ್ಲಿ ಶಾಲಾ-ಕಾಲೇಜುಗಳಿಂದ ದೂರು ಉಳಿಯಬೇಕಾಗುತ್ತದೆ.
ಇದು ಶಿಕ್ಷಣದ ಹಕ್ಕು ಮತ್ತು ಮೂಲಭೂತ ಹಕ್ಕಿನ ಜೊತೆಗೆ ನೈರ್ಮಲ್ಯ, ಹೆಣ್ಣು ಮಕ್ಕಳ ಘನತೆ ಮತ್ತು ಖಾಸಗಿತನದ ವಿಚಾರವೂ ಆಗಿದೆ. ಸರ್ಕಾರ ಈ ರೀತಿ ನಡೆದುಕೊಂಡರೆ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸಬಲೀಕರಣದ ಗುರಿ ಹೇಗೆ ಸಾಧಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿತು. ಶುಚಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಆ.5ಕ್ಕೆ ಮುಂದೂಡಿತು.
ಇದನ್ನೂ ಓದಿ: ಶೆಟ್ಟರ್ ಬಗ್ಗೆ ನನಗೆ ಗೌರವವಿದೆ, ಅವರ ಜೊತೆ ಫೋನ್ನಲ್ಲಿ ಮಾತನಾಡಿದ್ದೇನೆ: ಸಿಎಂ ಬೊಮ್ಮಾಯಿ