ಬೆಂಗಳೂರು: ನಗರದಲ್ಲಿ ಮಳೆನೀರು ಕೊಯ್ಲು ಅಳವಡಿಕೆ ಕಡ್ಡಾಯವಾಗಿದ್ದು, ಈ ಪದ್ಧತಿ ಅಳವಡಿಸದ ಸಾವಿರಾರು ಮನೆ ಮಾಲೀಕರಿಂದ 12 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ.
30/40 ಅಡಿ ನಿವೇಶನದಲ್ಲಿ ಮನೆಗಳನ್ನು ನಿರ್ಮಿಸುವವರಿಗೆ ನೀರು ಉಳಿತಾಯ ಮಾಡಲು ಮಳೆ ನೀರು ಕೊಯ್ಲು ಪದ್ಧತಿ ಕಡ್ಡಾಯ ಮಾಡಿದ್ದರೂ, ಸಾವಿರಾರು ನಿವಾಸಿಗಳು ಇನ್ನೂ ಅಳವಡಿಸಿಕೊಂಡಿಲ್ಲ. ತಿಂಗಳಿಗೆ ಸರಾಸರಿ ಐವತ್ತು ಸಾವಿರ ಮನೆಗಳಿಗೆ ದಂಡ ವಿಧಿಸಲಾಗುತ್ತಿದೆ. ಜಲಮಂಡಳಿಯಿಂದ ಜೂನ್ನಲ್ಲಿ 3.05 ಕೋಟಿ, ಜುಲೈನಲ್ಲಿ 3.22 ಕೋಟಿ, ಆಗಸ್ಟ್ನಲ್ಲಿ 3.04 ಕೋಟಿ, ಸೆಪ್ಟೆಂಬರ್ನಲ್ಲಿ 2.82 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ.
ವಸತಿ ಕಟ್ಟಡಗಳಿಗೆ ನೀರು ಹಾಗೂ ಒಳಚರಂಡಿ ಸಂಪರ್ಕ ಶುಲ್ಕದ ಒಟ್ಟು ಮೊತ್ತದ ಮೊದಲ ಮೂರು ತಿಂಗಳ ಬಿಲ್ನ ಶೇಕಡಾ 50 ರಷ್ಟು ದಂಡ ಮತ್ತು 3 ತಿಂಗಳ ನಂತರವೂ ಅಳವಡಿಸದಿದ್ದರೆ ಶೇ.100 ರಷ್ಟು ದಂಡ ವಿಧಿಸಲಾಗುತ್ತಿದೆ. ವಾಣಿಜ್ಯ ಕಟ್ಟಡಗಳಿಂದ ಮೊದಲ ಮೂರು ತಿಂಗಳು 100 ರಷ್ಟು, ನಂತರದಲ್ಲಿ ಶೇ. 200 ರಷ್ಟು ದಂಡ ವಸೂಲಿ ಮಾಡಲಾಗುತ್ತದೆ. ಇದಲ್ಲದೇ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವಾಗ ಮಳೆ ನೀರು ಕೊಯ್ಲು ಅಳವಡಿಸದವರಿಗೆ ಯಾವುದೇ ಕಾರಣಕ್ಕೂ ಸಂಪರ್ಕ ನೀಡದಂತೆಯೂ ಎಚ್ಚರಿಕೆ ನೀಡಲಾಗಿದೆ ಎಂದು ಜಲಮಂಡಳಿ ಪ್ರಧಾನ ಅಭಿಯಂತರ ಶಿವಪ್ರಸಾದ್ ತಿಳಿಸಿದ್ದಾರೆ.