ಬೆಂಗಳೂರು: ಆಗಸ್ಟ್ 29 ಕ್ರೀಡಾಪಟು ಮತ್ತು ಕ್ರೀಡಾ ಅಭಿಮಾನಿಗಳಿಗೆ ಬಹಳ ಮುಖ್ಯವಾದ ದಿನ. ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಹುಟ್ಟುಹಬ್ಬದ ಗೌರವಾರ್ಥ ಈ ದಿನಾಂಕವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸಲಾಗುತ್ತದೆ ಎಂದು ಕ್ರೀಡಾ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 2023ನೇ ಸಾಲಿನ ರಾಷ್ಟ್ರಿಯ ಕ್ರೀಡಾ ದಿನದ ಘೋಷವಾಕ್ಯ 'ಎಲ್ಲರನ್ನೂ ಒಳಗೊಳ್ಳುವ ಹಾಗೂ ಸದೃಢ ಸಮಾಜಕ್ಕಾಗಿ ಕ್ರೀಡೆ' ಎಂದಿದೆ. ಈ ಘೋಷವಾಕ್ಯದ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ 30ಕ್ಕೂ ಹೆಚ್ಚು ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆಗಸ್ಟ್ 29ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರಿಯ ಕ್ರೀಡಾ ದಿನ 2023ರ ಆಚರಣೆಯನ್ನು ಬಹಳ ವಿನೂತನ ರೀತಿಯಲ್ಲಿ ಆಯೋಜಿಸಲಾಗುತ್ತಿದೆ. ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುತ್ತದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಒಲಿಂಪಿಕ್ ಕ್ರೀಡೆಗಳು, ಸಾಹಸ ಕ್ರೀಡೆಗಳು, ದೇಶೀ, ಸಾಂಪ್ರದಾಯಿಕ ಕ್ರೀಡೆಗಳು ಹಾಗೂ ಮನರಂಜನೆ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಾಮಗ್ರಿ ಹಾಗೂ ಮ್ಯಾಟ್ಗಳ ಮೇಲೆ ಸ್ವತಃ ಆಟವಾಡಿ ಆನಂದಿಸುವ ಅವಕಾಶವನ್ನು ಒದಗಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಹಾಗೂ ಮುಕ್ತ ಪ್ರವೇಶವಿದೆ ಎಂದು ಹೇಳಿದರು.
ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಆರ್ಚರಿ, ಮಲ್ಲಕಂಬ, ಬಾಸ್ಕೆಟ್ ಬಾಲ್, ಸ್ಪೋರ್ಟ್ಸ್ ಕ್ಲೈಂಬಿಂಗ್, ರ್ಯಪೆಲ್ಲಿಂಗ್ ಫೆನ್ಸಿಂಗ್, ಬ್ಯಾಕಿಂಗ್, ಹಾಕಿ, ಆರ್ಚರಿ, ಜೂಡೋ, ಟೇಕ್ವಾಂಡೋ, ಮಣ್ಣಿನ ಕುಸ್ತಿ, ಹಗ್ಗಜಗ್ಗಾಟ, ಜುಮಾರಿಂಗ್, ಜಿಪ್ ಲೈನ್, ಸ್ಕೇಟಿಂಗ್, ಸ್ಕೇಟ್ ಬೋರ್ಡಿಂಗ್, ಚೆಸ್ ಫುಟ್ಬಾಲ್ ಇತ್ಯಾದಿ ಕ್ರೀಡೆಗಳಲ್ಲಿ ಭಾಗವಹಿಸಬಹುದು ಎಂದು ಮಾಹಿತಿ ನೀಡಿದರು.
ಈ ಬಾರಿಗೆ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ದೈಹಿಕ ಶಿಕ್ಷಕರಿಗೆ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಸನ್ಮಾನ ಮಾಡುವಂತೆ ಸರ್ಕಾರದ ವತಿಯಿಂದ ಸುತ್ತೋಲೆ ಹೊರಡಿಸಲಾಗುತ್ತಿದೆ. ಆಗಸ್ಟ್ 21 ರಿಂದ 29 ರವರೆಗೆ ರಾಜ್ಯಾದ್ಯಂತ ಪ್ರತಿ ದಿನ ಒಂದು ಕ್ರೀಡಾ ಸಂಬಂಧಿತ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ದೈಹಿಕ ಶಿಕ್ಷಕರನ್ನು ಸನ್ಮಾನಿಸುವ ಕೆಲಸವನ್ನೂ ಸಹ ಮಾಡಲಾಗುವುದೆಂದರು.
ಒಂದು ಜಿಲ್ಲೆ, ಒಂದು ಕ್ರೀಡೆ: ಕ್ರೀಡೆಯನ್ನು ಪಂಚಾಯಿತಿ ಮಟ್ಟಕ್ಕೂ ತೆಗೆದುಕೊಂಡು ಹೋಗಬೇಕೆಂಬ ಆಲೋಚನೆ ಇದೆ. ಹಾಗಾಗಿ, ಒಂದು ಜಿಲ್ಲೆ ಒಂದು ಕ್ರೀಡೆ ಎಂಬ ಬಗ್ಗೆ ವಿಚಾರ ಮಾಡುತ್ತಿದ್ದೇವೆ. ಆಯಾ ಜಿಲ್ಲೆಯಲ್ಲಿರುವ ಕ್ರೀಡೆಗೆ ಹೆಚ್ಚು ಮಹತ್ವ ನೀಡುವುದರ ಜೊತೆ ಇತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಾಗುವುದು. ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಆಟದ ಮೈದಾನ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ಸಿಎಂ, ಡಿಸಿಎಂ ನಡುವೆ ಪೈಪೋಟಿ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ಯಾವುದೇ ಪೈಪೋಟಿ ಇಲ್ಲ. ಇದೇ 27 ಕ್ಕೆ ಸರ್ಕಾರ ನೂರು ದಿನ ಪೂರೈಸುತ್ತಿದೆ. ಹಾಗಾಗಿ, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಸಮನ್ವಯದಲ್ಲಿ ಕೆಲಸ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಆರೋಪ ಸುಳ್ಳು, ನಾವೆಲ್ಲಾ ಒಟ್ಟಾಗಿದ್ದೇವೆ. ಜನರಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಮುಖ್ಯಮಂತ್ರಿಗಳು ಪ್ರೊಟೋಕಾಲ್ ಅನ್ನು ಯಾರೂ ಮೀರಲ್ಲ ಎಂದರು.
ಆಪರೇಷನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬಂದರೆ ಎಲ್ಲರಿಗೂ ಸ್ವಾಗತ. ಬಲವಂತದಿಂದ ಯಾರನ್ನೂ ಸೇರಿಸಿಕೊಳ್ಳುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಪಕ್ಷ ಸೇರ್ಪಡೆ ಪ್ರಯತ್ನ ನಡೆಯುತ್ತಿದೆ. ಲೋಕಸಭೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುತ್ತೇವೆ. ಯಾವ ರೀತಿಯಲ್ಲಿ ವಾಪಸ್ ಕರೆಸಿಕೊಳ್ಳಬೇಕು ಎಂದು ಪಕ್ಷ ತೀರ್ಮಾನ ಮಾಡುತ್ತದೆ. ನಮಗೆ ಯಾರನ್ನು ಸೇರ್ಪಡೆ ಮಾಡುವ ಹಪಾಹಪಿ ಇಲ್ಲ. ಆದರೆ ಯಾರಾದರೂ ಬಂದರೆ ನಾವು ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಆಗಸ್ಟ್ 30 ರಿಂದ ಯುಪಿಟಿ 20 ಲೀಗ್.. ಉದ್ಘಾಟನಾ ಪಂದ್ಯಕ್ಕೆ ಕಾನ್ಪುರ ಮೈದಾನ ಸಜ್ಜು