ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ ಡಿಕೆಶಿ ಸಹೋದರರಿಗೆ ಇಡಿ ಸಮನ್ಸ್ ನೀಡಿದ್ದು, ಇಂದು ವಿಚಾರಣೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೈರು ಹಾಜರಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಇಡಿ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಬೇರೆ ದಿನ ಹಾಜರಾಗುವುದಾಗಿ ಡಿಕೆಶಿ ತಿಳಿಸಿದ್ದಾರೆ.
ಇಡಿ ಸಮನ್ಸ್ಗೆ ಉತ್ತರ ಬರೆದಿರುವ ಡಿಕೆಶಿ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಬೇರೆ ದಿನಾಂಕದಂದು ಸಮಯ ನೀಡುವಂತೆ ಮನವಿ ಮಾಡಿದ್ದಾರೆ. ಇಮೇಲ್ ಮೂಲಕ ಅವರು ತಮ್ಮ ಮನವಿ ಪತ್ರ ಕಳುಹಿಸಿದ್ದಾರೆ. ಇವರ ಸೋದರ ಹಾಗೂ ಸಂಸದ ಡಿ ಕೆ ಸುರೇಶ್ ವಿಚಾರಣೆಗೆ ಹಾಜರಾಗಲಿದ್ದಾರೆ.
ಇಂದು ಕಿತ್ತೂರಿಗೆ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿರುವ ಡಿಕೆಶಿ ಬೆಳಗ್ಗೆಯೇ ಸದಾಶಿವನಗರ ನಿವಾಸದಿಂದ ತೆರಳಿದ್ದಾರೆ. ಬೆಳಗಾವಿಗೆ ತೆರಳಿರುವ ಅವರು ಸಂಜೆಯವರೆಗೆ ಅಲ್ಲಿದ್ದು ಕೆಲ ಸಭೆ ನಡೆಸಲಿದ್ದಾರೆ. ಇಂದು ಸಂಜೆ 5ಕ್ಕೆ ಕಿತ್ತೂರಿಗೆ ತೆರಳಿ ಅಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಹುಬ್ಬಳ್ಳಿಗೆ ವಾಪಸ್ ಆಗುವ ಅವರು ಅಲ್ಲಿಯೇ ತಂಗಲಿದ್ದು, ನಾಳೆ ಮಧ್ಯಾಹ್ನ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಬೆಳಗಾವಿಗೆ ತೆರಳಿದ್ದು, ಅವರು ಕೂಡ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಹಮ್ಮಿಕೊಂಡಿರುವ ಸೈನಿಕ ಶಾಲೆ ಕಾಮಗಾರಿಯನ್ನು ಅವರು ವೀಕ್ಷಿಸಲಿದ್ದಾರೆ.
ಸಿದ್ದರಾಮಯ್ಯ ಸಹ ಕಿತ್ತೂರು ಸಮಾರಂಭದ ಬಳಿಕ ಹುಬ್ಬಳ್ಳಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ (ಮಂಗಳವಾರ) ಬೆಳಗ್ಗೆ ಬದಾಮಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಎರಡು ದಿನ ಕ್ಷೇತ್ರದಲ್ಲಿ ತಂಗಿದ್ದು, ಸ್ಥಳೀಯ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಡಿಕೆಶಿ, ಸಹೋದರ ಡಿಕೆ ಸುರೇಶ್ಗೆ ಇಡಿಯಿಂದ ಮತ್ತೆ ಸಮನ್ಸ್ ಜಾರಿ