ಬೆಂಗಳೂರು: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಆರ್.ಜಿ. ಆನಂದ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಇಂದು ಸೌಹಾರ್ದಯುತವಾಗಿ ಭೇಟಿ ಮಾಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಭೇಟಿ ಮಾಡಿ ಕೆಲಕಾಲ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಸಮಾಲೋಚನೆ ನಡೆಸಿದರು. ಜಿಲ್ಲಾವಾರು ಪ್ರಗತಿ ಪರಿಶೀಲನಾ ಸಭೆ ಪ್ರಾರಂಭಿಸುವ ಮೊದಲು ರಾಜ್ಯದ ಸ್ಫೂರ್ತಿದಾಯಕ ಆಡಳಿತಗಾರ, ತಳಮಟ್ಟದಿಂದ ಬೆಳೆದು ಬಂದ ನಾಯಕ ಬಿ.ಎಸ್. ಯಡಿಯೂರಪ್ಪ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯುವುದಕ್ಕಾಗಿ ಆಗಮಿಸಿದ್ದಾಗಿ ಸಿಎಂ ಭೇಟಿ ಕುರಿತು ಡಾ.ಆರ್.ಜಿ ಆನಂದ್ ಮಾಹಿತಿ ನೀಡಿದ್ದಾರೆ.
ನಂತರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ನಿರ್ದೇಶನದಂತೆ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ನಡೆದ “ಕವಾಲ್” ಕುರಿತ ಪ್ರಸ್ತುತಿ ಕುರಿತು ಸಭೆಯಲ್ಲಿ ಭಾಗವಹಿಸಿದರು. ಕಾನೂನಿನೊಂದಿಗೆ ಸಂಘರ್ಷ ಎದುರಿಸುತ್ತಿರುವ ಮಕ್ಕಳ ಮಾನಸಿಕ ಮನೋವೈಜ್ಞಾನಿಕ ಆರೈಕೆ ಮಾಡುವ ಮತ್ತು ಮಧ್ಯಸ್ಥಗಾರರಿಗೆ ತರಬೇತಿ ನೀಡುವ ಪ್ರಸ್ತಾಪದ ಕುರಿತು ಚರ್ಚೆ ನಡೆಸಲಾಯಿತು.