ಬೆಂಗಳೂರು: ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ಚಾಲನೆ ಮಾಡಿದ ಲೊಕೋ ಪೈಲಟ್ ಶಿರಿಶಾ ಗಜಿನಿ ಅವರ ಜೊತೆಗೆ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಅವರ ಕಾರ್ಯವನ್ನು ಶ್ಲಾಘಿಸಿದರು.
ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು ರಸ್ತೆಯ ಮೂಲಕ ಪ್ರಯಾಣಿಸುವ ಆಮ್ಲಜನಕ ಟ್ಯಾಂಕರ್‌ಗಳಿಗಿಂತ ವೇಗವಾಗಿ ದೇಶದ ಎಲ್ಲಾ ಮೂಲೆಗಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಸಾಗಿಸಿದೆ. ಒಂದು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲನ್ನು ಮಹಿಳೆಯರಿಂದ ಸಂಪೂರ್ಣವಾಗಿ ನಡೆಸಲಾಗುತ್ತಿದೆ ಎನ್ನುವುದನ್ನು ಕೇಳಿದಾಗ ತಾಯಂದಿರು ಮತ್ತು ಸಹೋದರಿಯರು ಹೆಮ್ಮೆ ಪಡುತ್ತಾರೆ ಎಂದು ಪ್ರಧಾನಿ ಹೇಳಿದರು.
'ಈ ಪ್ರಯತ್ನದಲ್ಲಿ ರೈಲ್ವೆ ಇಲಾಖೆ ಬೆಂಬಲ ನೀಡಿದೆ ಮತ್ತು ಆಕ್ಸಿಜನ್ ಎಕ್ಸ್‌ಪ್ರೆಸ್‌ಗಾಗಿ 'ಗ್ರೀನ್ ಕಾರಿಡಾರ್' ಮೂಲಕ ತ್ವರಿತ ಸಾರಿಗೆಗೆ ಅನುಕೂಲವಾಯಿತು' ಎಂದು ಶಿರಿಶಾ ಗಜಿನಿ ಪ್ರಧಾನಿಗೆ ತಿಳಿಸಿದರು.
'ನಮ್ಮ ಪೋಷಕರೇ ನನಗೆ ಸ್ಫೂರ್ತಿ. ನಮ್ಮ ತಂದೆಗೆ ಮೂವರು ಹೆಣ್ಣುಮಕ್ಕಳಿದ್ದು ಅವರು ನಮಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ಪ್ರೋತ್ಸಾಹಿಸಿದರು' ಎಂದು ತಮ್ಮ ಪೋಷಕರ ಬಗ್ಗೆ ಶಿರಿಶಾ ಹೇಳಿದರು.
ಇದೇ ವೇಳೆ ಮಾತನಾಡುತ್ತಾ, ಸಹಾಯಕ ಲೊಕೋ ಪೈಲಟ್ ಅಪರ್ಣಾ ಆರ್.ಪಿ, ಸಹಾಯಕ ಲೊಕೋ ಪೈಲಟ್ ನೀಲಂ ಕುಮಾರಿ ಅವರು ಕೂಡಾ ಜೋಲರ್‌ಪೆಟ್ಟೈ ಜೆಎನ್‌ನಿಂದ ಬೆಂಗಳೂರಿಗೆ ಚಲಿಸುವ ವಿವಿಧ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳನ್ನು ಚಲಾಯಿಸಿದ್ದಾರೆ. ತಮ್ಮ ಸರದಿ ಬಂದಾಗ, ಅವರೆಲ್ಲಾ ಈ ರೈಲುಗಳನ್ನು ಓಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡರು. ಇದುವರೆಗೂ ಪುರುಷರ ಭದ್ರಕೋಟೆಯೆಂದು ಪರಿಗಣಿಸಲ್ಪಟ್ಟಿರುವ ಈ ಮಹಿಳೆಯರು ರೈಲ್ವೆಯಲ್ಲಿ ವೃತ್ತಿಜೀವನದ ಕನಸು ಕಾಣುತ್ತಿರುವ ಹಲವಾರು ಮಹಿಳೆಯರಿಗೆ ಮುಂದಿನ ದಿನಗಳಲ್ಲಿ ದಾರಿ ದೀಪವಾಗಿ ಮತ್ತು ಉದಾಹರಣೆಗಳಾಗಿ ಹೊರಹೊಮ್ಮುತ್ತಾರೆ ಎಂದು ಶಿರಿಶಾ ಪ್ರಧಾನಿಗೆ ತಿಳಿಸಿದರು.
ಕಳೆದ ಇಪ್ಪತ್ತು ದಿನಗಳಿಂದ ಗುಜಾರಾತ್‌ನಿಂದ ಬರುತ್ತಿರುವ ಆಮ್ಲಜನಕ ಎಕ್ಸ್‌ಪ್ರೆಸ್ ರೈಲುಗಳನ್ನು ಜೊಲಾರಪೇಟೆ ರೈಲ್ವೆ ನಿಲ್ದಾಣದಿಂದ ಬೆಂಗಳೂರಿನ ವೈಟ್‌ಫೀಲ್ಡ್ ನಿಲ್ದಾಣಕ್ಕೆ ಇಬ್ಬರು ಮಹಿಳಾ ಲೋಕೋ ಪೈಲೆಟ್ ಗಳಾದ ಶಿರಿಶಾ ಗಜಿನಿ ಮತ್ತು ಅಪರ್ಣಾ ಆರ್.ಪಿ. ಅವರು ಚಾಲನೆ ಮಾಡಿಕೊಂಡು ಬರುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸೌತ್ ವೆಸ್ಟರ್ನ್ ರೈಲ್ವೆ ವಿಭಾಗದ ಮಹಿಳೆಯೊಬ್ಬರು ರಾಜ್ಯಕ್ಕೆ ಆಮ್ಲಜನಕ ಸರಬರಾಜು ಮಾಡುತ್ತಿರುವುದು ಇಲ್ಲಿ ಗಮನಾರ್ಹ ಸಂಗತಿಯೂ ಹೌದು.