ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ನ 5 ಪಂದ್ಯಗಳಿಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನ ಆತಿಥ್ಯವಹಿಸುತ್ತಿದ್ದು, ವೀಕ್ಷಣೆಗೆ ತೆರಳುವ ಅಭಿಮಾನಿಗಳಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಿಹಿಸುದ್ದಿ ನೀಡಿದೆ. ಪಂದ್ಯ ವೀಕ್ಷಿಸಿ ವಾಪಸಾಗುವಾಗ ಮೆಟ್ರೋ ಬಳಸುವವರಿಗೆ ರಿಟರ್ನ್ ಟಿಕೆಟ್ ಬೆಲೆಯನ್ನು 50 ರೂ. ನಿಗದಿಪಡಿಸಲಾಗಿದೆ.
ವಿಶ್ವಕಪ್ ಪಂದ್ಯಾವಳಿಯಲ್ಲಿ ಅಕ್ಟೋಬರ್ 20 ರಂದು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ, ಅಕ್ಟೋಬರ್ 26 ರಂದು ಇಂಗ್ಲೆಂಡ್ ಮತ್ತು ಶ್ರೀಲಂಕಾ, ನವೆಂಬರ್ 4 ರಂದು ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ, ನವೆಂಬರ್ 9 ರಂದು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಹಾಗು ಕೊನೆಯ ನವೆಂಬರ್ 12 ರಂದು ಭಾರತ ಮತ್ತು ನೆದರ್ಲೆಂಡ್ಸ್ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ; ಹಲವರಿಗೆ ವೈರಲ್ ಫೀವರ್, ವೈದ್ಯಕೀಯ ನಿಗಾ
ಪೇಪರ್ ಟಿಕೆಟ್‌ಗಳನ್ನು ಆಯಾ ದಿನಗಳಲ್ಲಿ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿಯೂ ಬೆಳಿಗ್ಗೆ 7 ಗಂಟೆಯಿಂದ ವಿತರಣೆ ಮಾಡಲಾಗುತ್ತದೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4 ಗಂಟೆಯ ನಂತರ ಒಂದು ಪ್ರಯಾಣಕ್ಕೆ ಮಾತ್ರ ರಿಟರ್ನ್ ಟಿಕೆಟ್ ಮಾನ್ಯವಾಗಿರಲಿದೆ.
ಕಾಗದದ ಟಿಕೆಟ್ ಬೆಲೆ 50 ರೂ. ನಿಗದಿಯಾಗಿದ್ದು, ಕ್ಯೂ ಆರ್ ಕೋಡ್ ಟಿಕೆಟಿಗೆ ಶೇ.5 ರಷ್ಟು ರಿಯಾಯಿತಿಯನ್ನು ಪಂದ್ಯಗಳು ನಡೆಯುವ ದಿನಗಳಲ್ಲಿ ನೀಡಲಾಗಿದೆ. ಕ್ಯೂ ಆರ್ ಟಿಕೆಟ್‌ಗಳನ್ನು ವಾಟ್ಸ್‌ಆ್ಯಪ್, ನಮ್ಮ ಮೆಟ್ರೋ ಆ್ಯಪ್ ಅಥವಾ ಪೇಟಿಎಂ ಮೂಲಕ ಮುಂಗಡವಾಗಿ ಖರೀದಿಸಬಹುದು. ಇದಲ್ಲದೇ ಸ್ಮಾರ್ಟ್ ಕಾರ್ಡ್ ಮತ್ತು ಎನ್‌ಸಿಎಂಸಿ ಕಾರ್ಡ್‌ಗಳನ್ನು ಎಂದಿನಂತೆ ಉಪಯೋಗಿಸಬಹುದು. ಕಬ್ಬನ್ ಪಾರ್ಕ್ ಮತ್ತು ಎಂ.ಜಿ.ರಸ್ತೆಯ ಮೆಟ್ರೋ ಟಿಕೆಟ್ ಕೌಂಟರ್ಗಳಲ್ಲಿ ಜನದಟ್ಟಣೆ ತಗ್ಗಿಸಲು ಈ ವ್ಯವಸ್ಥೆ ಕೈಗೊಳ್ಳಲಾಗಿದೆ.
ಪಾಕ್-ಆಸೀಸ್ ಪಂದ್ಯಕ್ಕೆ ಬಿಗಿ ಬಂದೋಬಸ್ತ್: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಆತಿಥ್ಯವಹಿಸುತ್ತಿರುವ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಅಕ್ಟೋಬರ್ 20ರಂದು ಪಂದ್ಯ ನಡೆಯಲಿದೆ. ಇಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ ಪಂದ್ಯಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸಿದ್ಧತೆಗಳನ್ನು ಮಾಡಿಕೊಂಡಿದೆ. ಟಿಕೆಟ್ಗಳು ಬಹುತೇಕ ಸೋಲ್ಡೌಟ್ ಆಗಿವೆ. ಇನ್ನೊಂದೆಡೆ ಭಾನುವಾರ ಬೆಂಗಳೂರಿಗೆ ಬಂದಿಳಿದಿರುವ ಪಾಕಿಸ್ತಾನ ತಂಡ ನಗರ ತಲುಪಿದ ನಂತರ ಕೆಲ ಆಟಗಾರರು ಜ್ವರಕ್ಕೆ ತುತ್ತಾಗಿದ್ದಾರೆ ಎಂದು ಪಾಕಿಸ್ತಾನ ತಂಡದ ವಕ್ತಾರರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ-ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಿಗಿ ಭದ್ರತೆ