ಬೆಂಗಳೂರು: ಬೆಂಗಳೂರಿಗರು ಹೆಚ್ಚಾಗಿ ಓಡಾಟಕ್ಕೆ ನೆಚ್ಚಿಕೊಂಡಿರುವುದು ನಮ್ಮ ಮೆಟ್ರೋ ಸೇವೆ. ಸ್ವಾತಂತ್ರ್ಯೋತ್ಸವವಾದ ಮಂಗಳವಾರ ಬಹುತೇಕ ಮೆಟ್ರೋ ನಿಲ್ದಾಣಗಳು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿತ್ತು. ಬೆಳಗ್ಗೆಯಿಂದ ತಡರಾತ್ರಿವರೆಗೂ ಮೆಟ್ರೋ ನಿಲ್ದಾಣ ಪ್ರಯಾಣಿಕರಿಂದ ತುಂಬಿ ಹೋಗಿತ್ತು.
ಆಗಸ್ಟ್ 15ರಂದು ಒಂದೇ ನಮ್ಮ ಮೆಟ್ರೋ ರೈಲಿನಲ್ಲಿ 8,25,190 ದಾಖಲೆಯ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಮೆಟ್ರೋ ರೈಲಿನ ದಿನದ ಕಾರ್ಯಾಚರಣೆಯಲ್ಲಿ ಇದು ಹೊಸ ದಾಖಲೆಯಾಗಿದೆ. ಈ ಹಿಂದಿನ ಅತ್ಯಧಿಕ ಸಂಖ್ಯೆಯ 6.1 ಲಕ್ಷಕ್ಕಿಂತ 2 ಲಕ್ಷಕ್ಕಿಂತ ಹೆಚ್ಚು ಜನರು ಮೆಟ್ರೋ ಸಂಚಾರ ಮಾಡಿದ್ಧಾರೆ ಎಂದು ಬಿಎಂಆರ್ಸಿಎಲ್ ಮಾಹಿತಿ ನೀಡಿದೆ.
ಪರ್ಪಲ್ ಲೈನ್‌ನಲ್ಲಿ 2,58,984 ಜನ ಪ್ರಯಾಣಿಸಿದ್ದರೆ, ಗ್ರೀನ್ ಲೈನ್‌ನಲ್ಲಿ 4,02,068 ಸವಾರರು ಪ್ರಯಾಣಿಸಿದ್ದಾರೆ. ಈ ಹಿಂದೆ ಗರಿಷ್ಠ ಪ್ರಯಾಣದ ದಾಖಲೆ ಪರ್ಪಲ್ ಲೈನ್ನಲ್ಲಿತ್ತು. ಫ್ಲವರ್ ಶೋಗೆ ರಿಟರ್ನ್ ಪೇಪರ್ ಟಿಕೆಟ್ ನೀಡಿದ ಲಾಲ್‌ಬಾಗ್ ನಿಲ್ದಾಣ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ 80,000 ಪೇಪರ್ ಟಿಕೆಟ್‌ಗಳನ್ನು ನೀಡಿದ ನ್ಯಾಷನಲ್ ಕಾಲೇಜು ನಿಲ್ದಾಣದಿಂದ ನೀಡಲಾಗಿದೆ ಎಂದು ಬಿಎಂಆರ್ಸಿಎಲ್ ಹೇಳಿದೆ.
ಭರ್ಜರಿ ಆದಾಯ ಸಂಗ್ರಹ: ಸೋಮವಾರ ಒಂದೇ ದಿನ ಭಾರಿ ಪ್ರಮಾಣದಲ್ಲಿ ಪ್ರಯಾಣಿಸಿದ್ದರಿಂದ ನಮ್ಮ ಮೆಟ್ರೋ 1.47 ಕೋಟಿ ರೂ. ಟಿಕೆಟ್ ಆದಾಯ ಸಂಗ್ರಹವಾಗಿದೆ. ಈವರೆಗಿನ ಮೆಟ್ರೋದ ಗರಿಷ್ಟ ಟಿಕೆಟ್ ಆದಾಯ ಸಂಗ್ರಹ 1.2 ಕೋಟಿ ರೂ. ಆಗಿತ್ತು.
ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳ ಆವರಣದಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ಸ್
ಬಿಎಂಟಿಸಿ ಮೂಲಕ 30 ಲಕ್ಷ ಮಂದಿ ಪ್ರಯಾಣ: ಸ್ವಾತಂತ್ರ ದಿನಾಚರಣೆ ಪ್ರಯಕ್ತ ನಿನ್ನೆ ಒಂದು ದಿನ ಬಿಎಂಟಿಸಿ ಉಚಿತ ಪ್ರಯಾಣವನ್ನು ನೀಡಿತ್ತು. ತನ್ನ ಎಲ್ಲಾ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಕಲ್ಪಿಸಿತ್ತು. ಹೀಗಾಗಿ ಬಿಎಂಟಿಸಿ ಬಸ್ನಲ್ಲಿ ಲಕ್ಷಾಂತರ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ.
ರಾಜಕೀಯ ಪಕ್ಷಗಳ ವಿವಿಧ ಕಾರ್ಯಕ್ರಮ, ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ, ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಲಕ್ಷಾಂತರ ಮಂದಿ ಬಿಎಂಟಿಸಿ ಬಸ್ನಲ್ಲಿ ಓಡಾಟ ನಡೆಸಿದ್ದಾರೆ. ಬಿಎಂಟಿಸಿ ನೀಡಿದ ಅಂಕಿ ಅಂಶದ ಪ್ರಕಾರ, ನಿನ್ನೆ ಒಂದೇ ದಿನ ಬಿಎಂಟಿಸಿ ಬಸ್ನಲ್ಲಿ ಅಂದಾಜು 30 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ.