ಬೆಂಗಳೂರು: ಪಂಚರಾಜ್ಯದ ಚುನಾವಣೆಯ ಫಲಿತಾಂಶದಿಂದ ಭಾರತದಲ್ಲಿ ಹೊಸ ಯುಗದ ಆರಂಭವಾಗಲಿದೆ. ಇದೊಂದು ಆಶಯಗಳ ಸಂಕ್ರಮಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಇದೇ ವೇಳೆ ರಾಜ್ಯ ಸಚಿವ ಸಂಪುಟ ಬದಲಾವಣೆ ಬಗೆಗೂ ಅವರು ಮಾತನಾಡಿದರು.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣ ಸಂಕಲ್ಪ, ಭವ್ಯ ಕಾಶಿ ದಿವ್ಯ ಕಾಶಿ ನಿರ್ಮಾಣ, ಗಂಗಾ ಸ್ವಚ್ಛತೆ, ಗಂಗಾ ಪೂಜೆ ಇದೆಲ್ಲದರ ನಡುವೆ ಕಮಲ ಅರಳಿದೆ. ಪರಿಪೂರ್ಣ ಆಶೀರ್ವಾದವನ್ನು ಜನತಾ ಪ್ರಭು ನೀಡಿದ್ದಾನೆ ಎಂದರು.
ಸಂಪುಟದಲ್ಲಿ ಬದಲಾವಣೆ, ನಾಯಕತ್ವ ಬದಲಿಲ್ಲ: ರಾಜ್ಯದಲ್ಲಿ ಸಂಪುಟದಲ್ಲಿ ಬದಲಾವಣೆ ಆಗುವುದು ಖಚಿತ. ಆದರೆ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕಟೀಲ್ ಸ್ಪಷ್ಟಪಡಿಸಿದರು.
ಆಪ್‌ನಿಂದ ನಮಗೆ ಸಮಸ್ಯೆ ಇಲ್ಲ: ನಾಲ್ಕೂ ಕಡೆ ನಮ್ಮದೇ ಸರ್ಕಾರ ಇತ್ತು. ಮತ್ತೆ ನಾಲ್ಕು ಕಡೆ ಅಧಿಕಾರಕ್ಕೆ ಬರಲಿದ್ದೇವೆ. ಪಂಜಾಬ್‌ನಲ್ಲಿ ಕಾಂಗ್ರೆಸ್ ಇತ್ತು, ಈಗ ಆಪ್ ಬಂದಿದೆ. ದೆಹಲಿ ಬಳಿಕ ಆಪ್ ನಿಧಾನವಾಗಿ ಮೇಲೇಳುತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷ, ಪಂಜಾಬ್‌ನಲ್ಲಿ ಇದ್ದದ್ದು ಕಾಂಗ್ರೆಸ್. ಹಾಗಾಗಿ ನಮಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದರು.
ಪಂಚ ರಾಜ್ಯದ ಫಲಿತಾಂಶ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಲಾಯಿತು.