ಬೆಂಗಳೂರು: ಭಾರತದ ತ್ರಿವರ್ಣ ಧ್ವಜ ಕೆಳಕ್ಕಿಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಟೂಲ್‍ಕಿಟ್ ಭಾಗದ ಅನುಗುಣವಾಗಿ ದೇಶದೊಳಗೆ ಮತ್ತು ಪ್ರಪಂಚದಲ್ಲಿ ಭಾರತದ ಕುರಿತು ತಪ್ಪು ಅಭಿಪ್ರಾಯ ಮೂಡಿಸುವ ಕುತ್ಸಿತ ಮನೋಭಾವವನ್ನು ಇದು ಅನಾವರಣಗೊಳಿಸಿದೆ. ಇದು ಕೋಮು ಸೌಹಾರ್ದತೆ ಕದಡುವ ವ್ಯವಸ್ಥಿತ ಹುನ್ನಾರ ಎಂದು ಕಿಡಿ ಕಾರಿದರು.
ಖಾಲಿ ಇದ್ದ ಧ್ವಜಸ್ತಂಭದಲ್ಲಿ ಓಂಕಾರ ಧ್ವಜವನ್ನು ಹಾರಿಸಲಾಗಿದೆ. ತ್ರಿವರ್ಣ ಧ್ವಜವನ್ನು ಇಳಿಸಿ ಈ ಧ್ವಜ ಹಾರಿಸಿಲ್ಲ. ತ್ರಿವರ್ಣ ಧ್ವಜದ ಗೌರವ ಹೆಚ್ಚಳಕ್ಕಾಗಿ ಬಿಜೆಪಿ ಹಗಲಿರುಳೆನ್ನದೆ ಕೆಲಸ ಮಾಡುತ್ತಿದೆ. 20 ವರ್ಷಗಳ ಹಿಂದೆಯೇ ಈ ಸವಾಲನ್ನು ನಾವು ಸ್ವೀಕರಿಸಿ ಲಾಲ್ಚೌಕ್ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದ್ದೇವೆ. ಕರ್ನಾಟಕದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲು ಬಲಿದಾನ ಮಾಡಿದ ಪಕ್ಷ ನಮ್ಮದು ಎಂದು ತಿಳಿದ್ದಾರೆ.
ಕಳೆದ 70 ವರ್ಷಗಳಿಂದ ಕಾಂಗ್ರೆಸ್ ದೇಶದಲ್ಲಿ ಒಡೆದು ಆಳುವ ನೀತಿ, ಮತೀಯ ಭಾವನೆಯನ್ನು ಕೆರಳಿಸುವ ಹಾಗೂ ಜನರಲ್ಲಿ ಅಭದ್ರತೆ ಮೂಡಿಸುವ ಕಾರ್ಯ ಮಾಡುತ್ತಿದೆ. ರಾಜಕೀಯ ಕಾರಣ ಮತ್ತು ಸ್ವಾರ್ಥಕ್ಕಾಗಿ ದೇಶದ ಗೌರವವನ್ನು ಜಗತ್ತಿನ ಮುಂದೆ ಕಡಿಮೆಗೊಳಿಸುವ ಹುನ್ನಾರ ಇದರ ಹಿಂದಿದೆ ಹಾಗೂ ಇದನ್ನು ಬಿಟ್ಟು ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಂದ ಬೇರೆ ಏನನ್ನು ಅಪೇಕ್ಷಿಸಲು ಸಾಧ್ಯ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿರಿ: ಹಿಜಾಬ್ ಗದ್ದಲದಲ್ಲಿ ಪಿಎಫ್ಐ-ಎಸ್‌ಡಿಪಿಐ ಕುಮ್ಮಕ್ಕು ಆರೋಪ: ಮಧ್ಯಂತರ ಅರ್ಜಿ ಸಲ್ಲಿಕೆ
ಸಮಾಜ ಒಡೆಯುವ ಕೆಲಸಕ್ಕೆ ಕೆಪಿಸಿಸಿ ಅಧ್ಯಕ್ಷರು ಸ್ವಯಂ ಪ್ರೇರಣೆಯಿಂದ ಭಾಗಿಯಾಗಿರುವುದು ಸ್ಪಷ್ಟಗೊಂಡಿದೆ. ಇದು ಅತ್ಯಂತ ಆತಂಕಕಾರಿ ವಿಚಾರ. ತಿರಂಗ ಧ್ವಜವನ್ನು ಇಳಿಸಲಾಗಿದೆ ಎಂಬ ಸುಳ್ಳು ಹೇಳಿಕೆಯು ರಾಜ್ಯದ ವಿದ್ಯಾರ್ಥಿ ಸಮುದಾಯವನ್ನು ಉದ್ರೇಕಿಸುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಸುಳ್ಳು ಹೇಳುವುದನ್ನು ಕರಗತ ಮಾಡಿಕೊಂಡಿದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಮಾತನಾಡುವಾಗ ಹತ್ತು ಬಾರಿ ಯೋಚಿಸಬೇಕಾಗುತ್ತದೆ. ರಾಜ್ಯದಲ್ಲಿ ವಿದ್ಯಾರ್ಥಿ ಸಮುದಾಯ ಎದ್ದು ನಿಂತ ಸಂದರ್ಭದಲ್ಲಿ ನಾವಾಡುವ ಪ್ರತಿ ಮಾತಿಗೂ ಸೂಕ್ಷ್ಮತೆ ಇರಬೇಕಾಗುತ್ತದೆ. ಆದರೆ, ಕೆಪಿಸಿಸಿ ಅಧ್ಯಕ್ಷರು ಈ ಲಕ್ಷ್ಮಣರೇಖೆಯನ್ನ ದಾಟಿರುವುದು ವಿಷಾದನೀಯ ಎಂದು ತಿಳಿಸಿದರು.