ಬೆಂಗಳೂರು: ಕೊರೊನಾ ಹರಡುವಿಕ ತಡೆಗಟ್ಟುವಲ್ಲಿ ಪ್ರಮುಖವಾರುವ ಎನ್- 95 ಮಾಸ್ಕ್ಗಳ ಬೆಲೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಶೇಕಡಾ 45ಕ್ಕೂ ಹೆಚ್ಚಿನ ಪ್ರಮಾಣದ ದರವನ್ನು ಕಡಿಮೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.
ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ತಗೆದುಕೊಂಡ ಕ್ರಮಗಳ ಕುರಿತು ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಸಚಿವರು, ಎನ್ -94 ಮಾಸ್ಕ್ಗಳ ದರವನ್ನು ಮತ್ತಷ್ಟು ಕಡಿತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮಹಾಮಾರಿ ಕೊರೊನಾವನ್ನು ಭಾರತ ನಿಭಾಯಿಸಿದ ವೈಖರಿಗೆ ಜಗತ್ತಿನಲ್ಲೇ ಮೆಚ್ಚುಗೆ ವ್ಯಕ್ತವಾಗಿದೆ. ಅತ್ಯಂತ ಯಶಸ್ವಿಯಾಗಿ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರ ಮತ್ತು ತಮ್ಮ ಇಲಾಖೆ ವ್ಯಾಪ್ತಿಗೆ ಒಳಪಡುವ ಫಾರ್ಮಾ ಸೆಕ್ಟರ್ ವಿಭಾಗ ಉತ್ತಮ ಕೆಲಸ ಮಾಡಿದೆ. ಅದರ ಪರಿಣಾಮವಾಗಿ ಕೋವಿಡ್ ನಿಯಂತ್ರಣದಲ್ಲಿದೆ. ಇಲ್ಲವಾದಲ್ಲಿ 130 ಕೋಟಿ ಜನಸಂಖ್ಯೆಯ ಭಾರತದಲ್ಲಿ ಲಕ್ಷಾಂತರ ಜನ ಮಹಾಮಾರಿಗೆ ಬಲಿಯಾಗುತ್ತಿದ್ದರು. ಲಾಕ್ಡೌನ್ ನಂತಹ ಕ್ರಮಗಳಿಂದ ಕೊರೊನಾವನ್ನು ಹಿಮ್ಮೆಟ್ಟಿಸಲಾಗಿದೆ ಎಂದರು.
ಅಮೆರಿಕಾ, ಇಟಲಿ ಮತ್ತು ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ1.50 ಲಕ್ಷದ ಆಸುಪಾಸಿನಲ್ಲಿದೆ. ಕೊರೊನಾ ಬಳಿಕ ಭಾರತ ಜಗತ್ತಿನ ದೊಡ್ಡ ಶಕ್ತಿಯುತ ದೇಶವಾಗಿ ಹೊರ ಹೊಮ್ಮಲಿದೆ. ಫಾರ್ಮಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಕರ್ನಾಟಕದ ರಾಯಚೂರು, ಹಿಮಾಚಲ ಪ್ರದೇಶ ಸೇರಿದಂತೆ ದೇಶದ ನಾಲ್ಕು ಕಡೆ 14 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಫಾರ್ಮಾಸ್ಯುಟಿಕಲ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೇರಳದಲ್ಲಿಯೇ ಮೊದಲ ಕೊರೊನಾ ಪ್ರಕರಣ ಕಂಡುಬಂದಿದ್ದು, ಅಲ್ಲಿಯೇ ಮೊದಲ ಸಾವು ಸಂಭವಿಸಿತ್ತು. ತಾವು ಕೇರಳ ರಾಜ್ಯದ ಕೊರೊನಾ ಉಸ್ತುವಾರಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದು, ಈಗ ಕೇರಳದಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದರು.
ಕೇರಳ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಸೀಲ್ಡೌನ್ ಮಾಡಿದ್ದು, ಅತೀ ಹೆಚ್ಚು ಟೆಸ್ಟ್ಗಳನ್ನು ಮಾಡಿದ್ದಕ್ಕೆ ಆ ರಾಜ್ಯದಲ್ಲಿ ಕೊರೊನಾ ಹತೋಟಿಗೆ ಬಂದಿದೆ ಎಂದು ಕೇಂದ್ರ ಸಚಿವರು ಸಂದರ್ಶನದಲ್ಲಿ ವಿವರಿಸಿದರು.