ಬೆಂಗಳೂರು: ಲೋಕಾಪರ್ಣೆಗೆ ಸಿದ್ಧವಾಗುತ್ತಿರುವ ಮೈಸೂರು ರಸ್ತೆ ಟು ಕೆಂಗೇರಿವರೆಗೆ ನಮ್ಮ ಮೆಟ್ರೋ ಮಾರ್ಗದ ಶಾಸನಬದ್ಧ ಸುರಕ್ಷತೆ ತಪಾಸಣೆಯನ್ನ ಇಂದು ನಡೆಸಲಾಯ್ತು. ಮೆಟ್ರೋ ರೈಲ್ವೆ ಸುರಕ್ಷತ ಆಯುಕ್ತ ಅಭಯ್ ಕುಮಾರ್ ರಾಯ್ ಇಂದು ಪರಿಶೀಲನೆ ನಡೆಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಟ್ರಯಲ್ ರನ್ ನಡೆಸಲಾಗಿದೆ. ಈಗ ವಾಣಿಜ್ಯ ಸಂಚಾರಕ್ಕೆ ಸಿದ್ಧಗೊಂಡಿರುವ ಹಿನ್ನೆಲೆ ಇಂದು ಮತ್ತು ನಾಳೆ ಪರಿಶೀಲನೆ ನಡೆಯಲಿದೆ. ಒಟ್ಟು 7.53 ಕಿ.ಮೀ. ಉದ್ದದ 6 ಎತ್ತರಿಸಿದ ನಿಲ್ದಾಣ ಇರುವ ಮಾರ್ಗ ಇದಾಗಿದೆ. 1,560 ಕೋಟಿ ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣಗೊಂಡಿದೆ. ನಾಯಂಡಹಳ್ಳಿ- ಕೆಂಗೇರಿ ಮಾರ್ಗ ಸುರಕ್ಷಿತ ಅಂತ ಗ್ರೀನ್ ಸಿಗ್ನಲ್ ನೀಡಿದರೆ BMRCL ವಾಣಿಜ್ಯ ಸಂಚಾರ ಶುರು ಮಾಡಲಿದೆ. ಒಂದು ವೇಳೆ ಸೇವೆ ಶುರುವಾದರೆ ದಿನಕ್ಕೆ 75 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ.
ವಿಜಯನಗರ- ಮೈಸೂರು ರೋಡ್ ಮೆಟ್ರೋ ಮಾರ್ಗ ಇಂದು-ನಾಳೆ ಬಂದ್:
ನಮ್ಮ ಮೆಟ್ರೋ ನೂತನ ಮಾರ್ಗ ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮಾರ್ಗದ ಸುರಕ್ಷತೆ ಪರಿಶೀಲನೆ ಹಿನ್ನೆಲೆ ವಿಜಯನಗರ- ಮೈಸೂರು ರೋಡ್ ನೇರಳೆ ಮಾರ್ಗದ ಓಡಾಟ ಎರಡು ದಿನ ಸ್ಥಗಿತಗೊಳ್ಳಲಿದೆ. ಈ ದಿನದಂದು ಬೈಯಪ್ಪನಹಳ್ಳಿ ಮತ್ತು ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲುಗಳು ಸೇವೆ ಲಭ್ಯ ಇರಲಿದೆ. ಹಾಗೇ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆವರೆಗಿನ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ರೈಲು ಸೇವೆ ಬೆಳಗ್ಗೆ ಏಳರಿಂದ ಆರಂಭವಾಗಲಿದೆ. ಆದಾಗ್ಯೂ, ಹಸಿರು ಮಾರ್ಗದ ನಾಗಸಂದ್ರದಿಂದ ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿನಂತೆ ಸಂಚಾರ ಇರಲಿದೆ.