ಬೆಂಗಳೂರು: ಮೈಸೂರಿನ ಸೈಯದ್ ಇಸಾಕ್ ಅವರು ನಡೆಸುತ್ತಿದ್ದ ಉಚಿತ ಗ್ರಂಥಾಲಯವನ್ನು ಕೆಲ ದುಷ್ಕರ್ಮಿಗಳು ಸುಟ್ಟು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸುರೇಶ್ ಕುಮಾರ್ ಸ್ಪಂದಿಸಿದ್ದು, ಸಾವಿರಾರು ಪುಸ್ತಕಗಳನ್ನು ದಾನದ ರೂಪದಲ್ಲಿ ನೀಡಲು ಮುಂದೆ ಬಂದಿದ್ದಾರೆ.
ದುಷ್ಕರ್ಮಿಗಳ ಕೃತ್ಯಕ್ಕೆ ನಾಶವಾದ ಮೈಸೂರಿನ ಕನ್ನಡ ಪುಸ್ತಕ ಪ್ರೇಮಿ ಸೈಯದ್ ಇಸಾಕ್ರ ಗ್ರಂಥಾಲಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ 8,243 ಪುಸ್ತಕಗಳನ್ನು ದಾನದ ರೂಪದಲ್ಲಿ ಒದಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ದುಷ್ಕರ್ಮಿಗಳ ಕೃತ್ಯಕ್ಕೆ ಗ್ರಂಥಾಲಯ ಬಲಿಯಾದ ಸುದ್ದಿ ತಿಳಿದ ತಕ್ಷಣವೇ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಿಗೆ ಇಲಾಖೆಯಿಂದ ಪುಸ್ತಕಗಳನ್ನು ಒದಗಿಸಲು ಸೂಚಿಸಲಾಗಿತ್ತು. ಹಾಗೆಯೇ ಸೈಯದ್ ಇಸಾಕ್ ಅವರ ಗ್ರಂಥಾಲಯಕ್ಕೆ ನೆರವು ಒದಗಿಸುವಂತೆ ಕೋಲ್ಕತ್ತಾದ ರಾಜಾರಾಂ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.