ಬೆಂಗಳೂರು: ಸಾರ್ವಜನಿಕ ರಸ್ತೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸದ ಮತ್ತು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಬಂಧನದ ಎಚ್ಚರಿಕೆ ನೀಡಿದ ನಂತರ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಹಾಗೂ ವಲಯ ಆಯುಕ್ತ ಹೈಕೋರ್ಟ್‌ಗೆ ಖುದ್ದು ಹಾಜರಾಗಿ ಕ್ಷಮೆ ಕೋರಿದರು.
ನಗರದ ರಸ್ತೆಯೊಂದನ್ನು ಸ್ಥಳೀಯ ಚರ್ಚ್ ಒತ್ತುವರಿ ಮಾಡಿ ತಡೆಗೋಡೆ ನಿರ್ಮಿಸಿದ ವಿಚಾರವಾಗಿ ಮೈಸೂರಿನ ಮಾಜಿ ಕಾರ್ಪೋರೇಟರ್ ಪಿ. ಶ್ರೀಕಂಠಮೂರ್ತಿ ಹಾಗೂ ಇತರರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಪೀಠದ ಎದುರು ಹಾಜರಾದ ಮೈಸೂರು ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ಹಾಗೂ ವಲಯ-8ರ ವಲಯ ಆಯುಕ್ತರನ್ನು ಪೀಠ ಪ್ರಶ್ನಿಸಿತು.
ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿದ್ದರೂ ನೀವು ಏಕೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ?. ಸರ್ಕಾರದ ಸೇವೆಯಲ್ಲಿ ಇರಲು ನಿಮಗೆ ಇಷ್ಟವಿಲ್ಲವೇ?. ನ್ಯಾಯಾಲಯವು ನಿಮ್ಮನ್ನು ಬಂಧಿಸಿ ಜೈಲಿಗೆ ಕಳಿಸಬಹುದು. ಈ ಕ್ಷಣದಿಂದಲೇ ಸೇವೆಯಿಂದ ಅಮಾನತುಗೊಳಿಸಬಹುದು ಎಂಬುದು ತಿಳಿದಿಲ್ಲವೇ?. ಕೋರ್ಟ್ ಸೂಚನೆಯಿದ್ದರೂ ಏಕೆ ಸ್ಥಳ ಪರಿಶೀಲನೆ ವರದಿ ಸಲ್ಲಿಸಿಲ್ಲ?. ಏಕೆ ಒತ್ತುವರಿ ತೆರವುಗೊಳಿಸುತ್ತಿಲ್ಲ? ಎಂದು ಅಧಿಕಾರಿಗಳಿಬ್ಬರನ್ನೂ ಖಾರವಾಗಿ ಪ್ರಶ್ನಿಸಿತು.
ಹಿಂದಿನ ವಿಚಾರಣೆಗೆ ಹಾಜರಾಗದಿದ್ದಕ್ಕೆ ನ್ಯಾಯಾಲಯಕ್ಕೆ ಕ್ಷಮೆ ಕೋರಿದ ಅಧಿಕಾರಿಗಳು, ರಸ್ತೆ ಒತ್ತುವರಿ ಕುರಿತ ಸರ್ವೇ ವರದಿಯನ್ನು ಪೀಠಕ್ಕೆ ಸಲ್ಲಿಸಿದರು. ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಹೇಳಿಕೆ ಪರಿಗಣಿಸಿದ ಪೀಠ, ಒತ್ತುವರಿ ಜಾಗವನ್ನು ವಿಳಂಬ ಮಾಡದೇ ತೆರವುಗೊಳಿಸಿ ವರದಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಕರಣವೇನು?: ರಸ್ತೆ ಒತ್ತುವರಿ ಪ್ರಕರಣ ಸಂಬಂಧ ಪಾಲಿಕೆ ಆಯುಕ್ತರು ಮತ್ತು ವಲಯ ಆಯುಕ್ತರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು 2021ರ ಜೂ.25ರಂದು ಹೈಕೋರ್ಟ್ ಆದೇಶಿಸಿತ್ತು. ಅದಾದ ಬಳಿಕ ಹಲವು ಬಾರಿ ಅವಕಾಶ ನಿಡಿದರೂ ವರದಿಯೂ ಸಲ್ಲಿಸಿರಲಿಲ್ಲ. ಇದರಿಂದ ಪಾಲಿಕೆ ಆಯುಕ್ತರು ಹಾಗೂ ವಲಯ - 8ರ ವಲಯ ಆಯುಕ್ತರ ವಿರುದ್ಧ ತಲಾ 25 ಸಾವಿರ ರೂ. ಮೊತ್ತದ ಜಾಮೀನು ಸಹಿತ ವಾರಂಟ್ ಹೊರಡಿಸಿದ್ದ ಪೀಠ ವಿಚಾರಣೆಗೆ ಖುದ್ದು ಹಾಜರಾಗುವಂತೆ ನಿರ್ದೇಶಿತ್ತು. ಇಷ್ಟಾದರೂ ಅಧಿಕಾರಿಗಳು ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದರು.
ಇದರಿಂದ ಅಧಿಕಾರಿಗಳಿಬ್ಬರನ್ನು ಬಂಧಿಸಲು ಆದೇಶಿಸಬೇಕಾಗುತ್ತದೆ ಎಂದು ಹೈಕೋರ್ಟ್ ಅ.27ರಂದು ಎಚ್ಚರಿಕೆ ನೀಡಿತ್ತು. ಅಲ್ಲದೆ, ಈ ಅಧಿಕಾರಿಗಳಿಬ್ಬರು ಅ.29ರಂದು ವಿಚಾರಣೆಗೆ ಹಾಜರಾಗಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ತಾಕೀತು ಮಾಡಿತ್ತು. ಹೀಗಾಗಿ ಮೈಸೂರು ಪಾಲಿಕೆ ಆಯಕ್ತ ಮತ್ತು ವಲಯ-8ರ ವಲಯ ಆಯುಕ್ತರಿಬ್ಬರು ಹೈಕೋರ್ಟ್‌ಗೆ ಹಾಜರಾಗಿ ಕ್ಷಮೆಯಾಚಿಸಿದರು.