ಬೆಂಗಳೂರು: ವಾಣಿಜ್ಯ ಹಾಗೂ ಕೈಗಾರಿಕೆ ಉತ್ತೇಜನ ನೀಡುವ ಎಫ್ಕೆಸಿಸಿಐ ಅಧ್ಯಕ್ಷನಾಗಿ ಉದ್ಯೋಗ ಸೃಷ್ಟಿಗೆ ಮೊದಲ ಗಮನ ಹರಿಸುವ ಗುರಿ ಹೊಂದಿದ್ದೇನೆ ಎಂದು ಎಫ್ಕೆಸಿಸಿಐ ನೂತನ ಅಧ್ಯಕ್ಷ ಸಿ.ಆರ್. ಜನಾರ್ದನ್ ತಿಳಿಸಿದ್ದಾರೆ.
ಈಟಿವಿ ಭಾರತ್ ಜತೆ ಮಾತನಾಡಿದ ಅವರು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಬಂಡವಾಳ ಬರಬೇಕು. ರಾಜ್ಯಕ್ಕೆ ಬಂಡವಾಳ ಹರಿದು ಬರಬೇಕು. ಇದಕ್ಕೆ ಎನ್ಆರ್ಐಗಳ ಸಹಕಾರ ಅತ್ಯಂತ ಮುಖ್ಯ. ಇದಕ್ಕಾಗಿಯೇ ಆಶಿಯಾನ್ ಸಮಿಟ್ ಆಯೋಜಿಸಿದ್ದೆವು. 2 ಲಕ್ಷ ಕೋಟಿ ಆಶ್ವಾಸನೆ ಬಂದಿದ್ದು, ಈಗಾಗಲೇ ಈ ವಿಶ್ವಾಸದ ಮೇಲೆ ಕೆಐಎಡಿಬಿಗೆ ಭೂಮಿ ನೀಡುವಂತೆ ಕೋರಿದ್ದೇವೆ. ಬರುತ್ತಿದ್ದಂತೆ ರಾಜ್ಯಕ್ಕೆ ಉತ್ತಮ ಆರ್ಥಿಕ ಹರಿವು ಬರಲಿದೆ.
ಇದರಿಂದ ನಗರದ ಜತೆ ಗ್ರಾಮೀಣ ಭಾಗವೂ ಅಭಿವೃದ್ಧಿ ಹೊಂದಲಿದೆ. ಕೃಷಿ ಉತ್ಪನ್ನಕ್ಕೆ ಬೆಲೆ ತರಬೇಕು. ಆಲುಗಡ್ಡೆ, ಈರುಳ್ಳಿ, ಟೊಮೆಟೊ ಗೆ ಉತ್ತೇಜನ ಕೊಡಿಸುವ ಗುರಿ ಹೊಂದಿದ್ದೇನೆ. ಕೋಲ್ಡ್ ಸ್ಟೋರೇಜ್ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿದ್ದಾಗಿ ತಿಳಿಸಿದರು.
ನಗರ ದಟ್ಟಣೆಗೆ ಪರಿಹಾರ
ನಗರಪ್ರದೇಶದ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿ ವಹಿವಾಟು ಹೆಚ್ಚಾಗಿ ನಡೆಯುವುದರಿಂದ ಹೆಚ್ಚಿನ ತೆರಿಗೆ ಸಂಗ್ರಹದ ಗುರಿ ಹಮ್ಮಿಕೊಳ್ಳುವುದು. ಉತ್ತಮ ಬೆಂಗಳೂರು ನಗರಕ್ಕೆ ಎರಡು ಪ್ರತ್ಯೇಕ ಕ್ಲಸ್ಟರ್ ನಿರ್ಮಿಸುವ ಗುರಿ ಹೊಂದಿದ್ದೇವೆ. ಇದಲ್ಲದೇ ರಾಜ್ಯದಲ್ಲಿ ಒಟ್ಟು 9 ಕ್ಲಸ್ಟರ್ಗಳನ್ನು ನಿರ್ಮಿಸುವುದು ನಮ್ಮ ಉದ್ದೇಶವಾಗಿದೆ. ರಾಜ್ಯ ಸರ್ಕಾರದಿಂದಲೂ ಉತ್ತಮ ಸಹಕಾರದ ಭರವಸೆ ಸಿಕ್ಕಿದೆ. ತ್ಯಾಜ್ಯ ನಿರ್ವಹಣೆ ಹಾಗೂ ಕಲುಷಿತ ನೀರು ಶುದ್ಧೀಕರಿಸುವ ವಿಚಾರದಲ್ಲಿಯೂ ಒಂದಿಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶ ಇದೆ.
ಮುಂದಿನ ಒಂದು ವರ್ಷದ ಅಧಿಕಾರ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಕೆಲಸವನ್ನು ಮಾಡುತ್ತೇನೆ. ಹಿಂದಿನ ಅಧ್ಯಕ್ಷರು ಮಾಡಿದ ಕೆಲವಷ್ಟು ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಆ ನಿಟ್ಟಿನಲ್ಲಿಯೂ ಗಮನಹರಿಸುತ್ತೇನೆ. ದಾಬಸ್ ಪೇಟೆಯಲ್ಲಿ ಕೌಶಲ್ಯ ಕೇಂದ್ರ ನಿರ್ಮಿಸುವುದು ಇದರಲ್ಲಿ ಒಂದು ಪ್ರಮುಖ ಕಾರ್ಯವಾಗಿದೆ ಎಂದರು.
ತ್ಯಾಜ್ಯ ವಿಲೇವಾರಿಗೆ ಕ್ರಮ
ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕ ರೀತಿಯಲ್ಲಿ ಆಗುತ್ತಿಲ್ಲ. ಇದರಿಂದಾಗಿ ಅಭಿವೃದ್ಧಿ ರಾಷ್ಟ್ರಗಳಿಗೆ ನಮ್ಮ ನಗರದಿಂದ ನಿಯೋಗ ಕೊಂಡೊಯ್ಯುವ ಆಶಯವನ್ನು ಹೊಂದಿದ್ದೇನೆ. ನಗರ ಮಾಲಿನ್ಯ ಮುಕ್ತ ಹಾಗೂ ಕಡಿಮೆ ಸಿಬ್ಬಂದಿಯಿಂದ ಕೌಶಲ್ಯಯುತವಾಗಿ ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಕುರಿತು ನಿಯೋಗಕ್ಕೆ ಮನವರಿಕೆ ಮಾಡಿಸುವುದು ನನ್ನ ಗುರಿ. ಮೋದಿ ಪ್ರಧಾನಿ ಆದ ನಂತರ ಸ್ವಚ್ಛತೆ ಕುರಿತು ಜಾಗೃತಿ, ಜವಾಬ್ದಾರಿ ಮೂಡಿದೆ. ಅದನ್ನು ಬಳಸಿಕೊಳ್ಳುತ್ತೇವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ಸಿಗುವ ನಿರೀಕ್ಷೆ ಇದೆ. ಸರ್ಕಾರಗಳ ಬಳಿ ಹಣಕಾಸಿನ ಕೊರತೆ ಇಲ್ಲ. ಬದಲಾಗಿ ಇಚ್ಛಾಶಕ್ತಿ ಕೊರತೆ ಇದೆ. ನಾವು ಅದನ್ನು ನಿವಾರಿಸುವ ಕಾರ್ಯ ಮಾಡುತ್ತೇವೆ. ಸಮಗ್ರ ಅಭಿವೃದ್ಧಿಗೆ ನಾವು ಸಹಕಾರ ನೀಡುತ್ತಿದ್ದೇವೆ. ಅದನ್ನು ಸರ್ಕಾರಗಳು ಗಮನಿಸಲಿವೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.