ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಪ್ರಸಿದ್ಧ ದೇವಸ್ಥಾನಗಳು ಸಾವಿರಾರು ಎಕರೆ ಬೆಲೆ ಬಾಳುವ ಭೂಮಿಯನ್ನು ಹೊಂದಿವೆ. ಆದರೆ, ದೇವರ ಭೂಮಿಗೆ ಭೂಗಳ್ಳರು ವಕ್ರ ದೃಷ್ಟಿ ಬೀರಿದ್ದು, ಒತ್ತುವರಿ ಜಮೀನುಗಳ ಪತ್ತೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ.
ರಾಜ್ಯದಲ್ಲಿ ಅನೇಕ ಪ್ರಸಿದ್ಧ ದೇವಾಲಯಗಳಿವೆ. ಮುಜರಾಯಿ ಇಲಾಖೆ ವ್ಯಾಪ್ತಿಗೆ 34,564 ದೇಗುಲಗಳು ಬರುತ್ತವೆ. ಈ ಪೈಕಿ ಪ್ರಸಿದ್ಧಿ ಪಡೆದಿರುವ ಎ ವರ್ಗದ (25 ಲಕ್ಷ ರೂ. ಮೇಲ್ಪಟ್ಟ ವಾರ್ಷಿಕ ಆದಾಯ) ದೇವಾಲಯಗಳು 205 ಇವೆ. ಇನ್ನು 139 ಬಿ ವರ್ಗದ (5-25 ಲಕ್ಷ ರೂ. ವಾರ್ಷಿಕ ಆದಾಯ) ದೇವಸ್ಥಾನಗಳಿವೆ. ಸುಮಾರು 34,220 ಸಿ ವರ್ಗದ (ವಾರ್ಷಿಕ 5 ಲಕ್ಷ ರೂ. ಗಿಂತ ಕಡಿಮೆ ಆದಾಯ) ಸಣ್ಣ ದೇವಾಲಯಗಳಿವೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ಸುಮಾರು 34,564 ದೇಗಲಗಳು 10,000 ಲಕ್ಷ ಕೋಟಿ ಬೆಲೆ ಬಾಳುವ ಆಸ್ತಿ ಹೊಂದಿವೆ. ಆದರೆ, ಈ ಭೂಮಿಗೆ ಭೂ ಗಳ್ಳರು ಕನ್ನ ಹಾಕಿದ್ದು, ಸಾವಿರಾರು ಎಕರೆ ಮುಜರಾಯಿ ದೇವಾಲಯಗಳ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಅರ್ಧಕ್ಕೆ ನಿಂತಿರುವ ದೇಗುಲಗಳ ಭೂಮಿ ಸರ್ವೇ ಕಾರ್ಯ: ದೇವಾಲಯಗಳ ಭೂ ಒತ್ತುವರಿ ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರ, ದೇವಾಲಯಗಳ ಭೂ ಒತ್ತುವರಿ ಪತ್ತೆ ಹಚ್ಚಿ ಅವುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆಯನ್ನು ಕಳೆದ ವರ್ಷ 2020ರ ಆರಂಭದಿಂದಲೇ ಪ್ರಾರಂಭಿಸಿತ್ತು. ಆದರೆ, ಕೋವಿಡ್, ಲಾಕ್‌ಡೌನ್ ಹಿನ್ನೆಲೆ ಸರ್ವೇ ಕಾರ್ಯಕ್ಕೆ ಹಿನ್ನಡೆ ಉಂಟಾಯಿತು. ಕಂದಾಯ ಇಲಾಖೆಗಳ ಮೂಲಕ ದೇವಾಲಯಗಳಿಗೆ ಸೇರಿದ ಭೂಮಿಯ ಸರ್ವೆ ಕಾರ್ಯ ನಡೆಸಲಾಗುತ್ತಿದ್ದು, ಭೂ ಒತ್ತುವರಿ ಪತ್ತೆ ಹಚ್ಚಲಾಗುತ್ತಿದೆ.
ಸರ್ವೆಯರ್ಗಳ ಕೊರತೆ: ದೇವಾಲಯಕ್ಕೆ ಸಂಬಂಧಿಸಿದ ಭೂಮಿಯ ಒತ್ತುವರಿ ಪ್ರಕರಣಗಳು ಕಂಡುಬಂದಲ್ಲಿ ಅದನ್ನು ತೆರವುಗೊಳಿಸಲು ಕರ್ನಾಟಕ ಭೂ ಕಂದಾಯ ಅಧಿನಿಯಮ 1964, ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ 2011 ಹಾಗೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ಧತ್ತಿಗಳ ಅಧಿನಿಯಮ -1997 ಕಾಯ್ದೆ ಮತ್ತು ಅದಕ್ಕೆ ಸಂಬಂಧಿಸಿದ ಇತರ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.
ಸರ್ವೆಯರ್ಗಳ ಕೊರತೆ ಹಿನ್ನೆಲೆ ಸೀಮಿತ ಸರ್ವೆಯರ್ಗಳಿಂದ ಸರ್ವೇ ಕಾರ್ಯ ನಿಧಾನವಾಗಿ ನಡೆಯುತ್ತಿರುವುದಾಗಿ ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಮುಜರಾಯಿ ಆಸ್ತಿಗಳನ್ನು ಸಂರಕ್ಷಿಸಲು 100 ಕೋಟಿ ರೂ. ಮೀಸಲಿಡಲಾಗಿದೆ.
ಆ ಮೂಲಕ ಎಲ್ಲಾ ಮುಜರಾಯಿ ದೇವಸ್ಥಾನಗಳ ಆಸ್ತಿ ಸರ್ವೇಗೆ ನಿರ್ಧರಿಸಿದೆ. ಆದರೆ ಸರ್ವೇ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಭೂ ಒತ್ತುವರಿ ಪತ್ತೆ ಹಚ್ಚುವುದೇ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಒಟ್ಟು ಒತ್ತುವರಿ ಪತ್ತೆ ಎಷ್ಟು?: ಈವರೆಗೆ ಮುಜರಾಯಿ ಇಲಾಖೆ 262 ದೇವಾಲಯಗಳ ಆಸ್ತಿಗಳ ಸರ್ವೇ ಕಾರ್ಯ ಮಾಡಿದೆ. ಕಂದಾಯ ಭೂಮಿಯಲ್ಲಿ ಒಟ್ಟು 2,342.21 ಎಕರೆ ಭೂಮಿ ಅಳತೆ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ 9,10,466.6 ಚ.ಮೀ. ವಿಸ್ತೀರ್ಣದ ಮುಜರಾಯಿ ದೇವಾಲಯಗಳ ಆಸ್ತಿಯನ್ನು ಸರ್ವೇ ಮಾಡಲಾಗಿದೆ.
ಈ ಪೈಕಿ ಕಂದಾಯ ಭೂಮಿಯಲ್ಲಿ 849.26 ಎಕರೆ ಮುಜರಾಯಿ ಆಸ್ತಿ ಒತ್ತುವರಿ ಮಾಡಲಾಗಿದೆ. ಅದೇ ನಗರ ಪ್ರದೇಶಗಳಲ್ಲಿ 79,881.76 ಚ.ಮೀ. ನಷ್ಟು ವಿಸ್ತೀರ್ಣದ ಜಮೀನು ಒತ್ತುವರಿಯಾಗಿದೆ ಎಂದು ಮುಜರಾಯಿ ಇಲಾಖೆ ಅಂಕಿ- ಅಂಶ ನೀಡಿದೆ.
ಇದನ್ನೂ ಓದಿ: ಓದಿದ್ದು 10ನೇ ತರಗತಿ, ಹಲವು ಕೃಷಿ ಸಾಧನಗಳ ಆವಿಷ್ಕಾರ!: ಧಾರವಾಡದ ರೈತ ಅಬ್ದುಲ್ ಖಾದರ್‌ಗೆ 'ಪದ್ಮಶ್ರಿ'