ಆನೇಕಲ್: ಬಿಜೆಪಿ 2014ರ ಪ್ರಣಾಳಿಕೆಯಂತೆ ನಡೆದುಕೊಂಡಿಲ್ಲ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಿಲ್ಲ. ಆ ಬಗ್ಗೆ ಗೆದ್ದ ಮೇಲೆ ಮಾತನಾಡದೇ ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಮಮಂದಿರ ವಿಚಾರ ಪ್ರಸ್ತಾಪಿಸುತ್ತೀರಿ. ನರೇಂದ್ರ ಮೋದಿಯವರೆ ಹಿಂದು-ಮುಸ್ಲಿಂ -ಕ್ರಿಶ್ಚಿಯನ್ ನಡುವೆ ಕಿಡಿ ಹಚ್ಚಬೇಡಿ ಎಂದು ಆಹಾರ ಸಚಿವ ಜಮೀರ್ ಅಹ್ಮದ್ ಮೋದಿ ಪರ ಪ್ರಚಾರಿಕರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬೊಮ್ಮನಹಳ್ಳಿಯ ಮಂಗಮ್ಮನ ಪಾಳ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಪ್ರಪಂಚದ ಇತರೆ ದೇಶಗಳನ್ನು ಸುತ್ತಿ ಬಂದಿರುವೆ. ಆದ್ರೆ ಭಾರತದಲ್ಲಿರುವ ಪರಧರ್ಮ ಸಹಿಷ್ಣುತೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅದು ಇಲ್ಲಿಯವರೆಗೆ ನಡೆದುಕೊಂಡು ಬಂದಿದೆ ಎಂದರೆ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ಅದಕ್ಕೂ ಬೆಂಕಿಯೊಡುವ ಬಿಜೆಪಿಯ ಆಟ ಇಲ್ಲಿ ನಡೆಯಲ್ಲ ಎಂದು ಗುಡುಗಿದರು.
ದೇಶಭಕ್ತಿಗೆ ಧರ್ಮ ಬೇಕಿಲ್ಲ, ಮುಸ್ಲಿಂ-ಕ್ರಿಶ್ಚಿಯನ್-ಹಿಂದೂಗಳ ಸಾಮರಸ್ಯವೇ ನಿಜವಾದ ದೇಶಭಕ್ತಿ. ನಾವು ನಿಜವಾದ ಇಂಡಿಯಾದ ದೇಶ ಭಕ್ತರು. ಆದ್ರೆ ಬಿಜೆಪಿ ರಾಜಕೀಯಕ್ಕಾಗಿ ದ್ವೇಷ ಭಕ್ತಿಯೆಡೆಗೆ ವಾಲಿದ್ದಾರೆ ಎಂದು ಜಮೀರ್ ಆರೋಪಿಸಿದರು. ಕುರಾನ್ನಲ್ಲಿ ಯಾವುದೇ ಧರ್ಮದ ವಿರುದ್ದ ಪ್ರಸ್ತಾಪಗಳಿಲ್ಲ. ನಾವೇ ನಿಜವಾದ ದೇಶಭಕ್ತರು. ಅಯೋಧ್ಯೆಯಲ್ಲಿ ಮಂದಿರವೂ ಇರಲಿ ಮಸೀದಿಯೂ ಇರಲಿ. ನಾವೇ(ಮುಸ್ಲಿಂರೇ) ರಾಮಮಂದಿರ ಕಟ್ಟುತ್ತೇವೆ. ಆದ್ರೆ ನೀವು ರಾಜಕೀಯಕ್ಕಾಗಿ ಧರ್ಮಗಳ ನಡುವೆ ಬೆಂಕಿ ಹಚ್ಚಬೇಡಿ, ರಾಜಕೀಯ ಬೆರೆಸಬೇಡಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇದೇ ವೇಳೆ ಸಾರೆ ಜಹಾಂಸೆ ಅಚ್ಚಾ, ಹಿಂದೂಸ್ತಾನ್ ಹಮಾರಾ… ಜಮೀರ್ ಅಹ್ಮದ್ ಘೋಷಣೆ ಕೂಗಿದರು. ವೇದಿಕೆಯಲ್ಲಿ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ, ಅಭ್ಯರ್ಥಿ ಬಿ ಕೆ ಹರಿಪ್ರಸಾದ್, ವಿಧಾನ ಪರಿಷತ್ ಸಧಸ್ಯ ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಜಯನಗರ ಶಾಸಕಿ ಸೌಮ್ಯರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಕೃಷ್ಣಪ್ಪ, ಸುಷ್ಮಾ ರಾಜಗೋಪಾಲರೆಡ್ಡಿ, ಹೆಚ್ಎಸ್ಆರ್ ವಾಸುದೇವರೆಡ್ಡಿ ಸೇರಿದಂತೆ ಇತರರು ಕಾಂಗ್ರೆಸ್ ಅಭ್ಯರ್ಥಿ ಪರ ಮತ ಯಾಚಿಸಿದರು.