ಬೆಂಗಳೂರು: ಆಟೋದಲ್ಲಿ ಪ್ರಯಾಣಿಕನ ರೀತಿ ಬಂದ ಕಿರಾತಕನೋರ್ವ ಚಾಲಕನ ಕತ್ತು ಕುಯ್ದು ಬರ್ಬರವಾಗಿ ಕೊಲೆ ಮಾಡಿ ಘಟನೆ ನಗರದ ಡಿಜೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿನೋದ್ ಕೊಲೆಯಾಗಿರುವ ಆಟೋ ಚಾಲಕ. ರಾಜು ಎಂಬಾತ ಕೊಲೆ ಮಾಡಿರುವ ಆರೋಪಿ. ಹಲವು ವರ್ಷಗಳಿಂದ ಆಟೋ ಡ್ರೈವರ್ ವಿನೋದ್ ಡಿಜೆ ಹಳ್ಳಿ ಬಳಿ ವಾಸವಾಗಿದ್ದ. ಕಳೆದ 12 ವರ್ಷಗಳ ಹಿಂದೆ ಸಂಬಂಧಿಯೇ ಆಗಿದ್ದ ಅನಿತಾಳನ್ನು ಮದುವೆ ಆಗಿದ್ದ. ಮೊದ-ಮೊದಲು ಎಲ್ಲಾ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ಈ ನಡುವೆ ಅತ್ತೆ ಮಾವನ ಜೊತೆ ಸೊಸೆ ಅನಿತಾ ಕಿತ್ತಾಟವಾಗಿದ್ದರಿಂದ ಮನೆ ಬಿಟ್ಟು ಹೋಗಿದ್ದರು. ಹೊಸಕೋಟೆ ಬಳಿಯ ಅವಲಹಳ್ಳಿಗೆ ಹೋಗಿ ಅಲ್ಲಿಯೇ ವಾಸವಿದ್ದು, ಗಾರ್ಮೆಂಟ್ಸ್ ಕೆಲಸಕ್ಕೆ ಹೋಗ್ತಿದ್ದರು. ಈ ವೇಳೆ ಅನಿತಾಗೆ ನಾರಾಯಾಣಗೌಡ ಎಂಬಾತನ ಪರಿಚಯವಾಗಿದ್ದು, ಮೊದ್ಲು ಸ್ನೇಹ ಬೆಳೆಸಿದ್ದ ಅನಿತಾ ಬಳಿಕ ಆತನೊಂದಿಗೆ ವಿವಾಹೇತರ ಸಂಬಂಧ ಬೆಳೆಸಿದ್ದಳು ಎನ್ನಲಾಗ್ತಿದೆ. ಒಂದು ದಿನ ಇಬ್ಬರ ನಡುವಿನ ಸಂಬಂಧ ಗಂಡ ವಿನೋದ್ಗೆ ಗೊತ್ತಾಗಿತ್ತು. ಆತನಿಂದ ದೂರವಾಗಿರುವಂತೆ ವಿನೋದ್ ಪತ್ನಿಗೆ ಹೇಳಿದ್ದ. ಆದ್ರೆ ಪ್ರಿಯಕರ ನಾರಾಯಣಗೌಡನ ಜೊತೆ ಅನಿತಾ ತನ್ನ ಲವ್ವಿ-ಡವ್ವಿ ಮುಂದುವರೆಸಿದ್ದಳು. ಎಷ್ಟೇ ಬಾರಿ ಎಚ್ಚರಿಕೆ ಕೊಟ್ರು ಅನಿತಾ ಕೇಳದಿದ್ದಾಗ ಹಾಳಾಗಿ ಹೋಗ್ಲಿ ಅಂತ ಗಂಡ ವಿನೋದ್ ಸುಮ್ಮನಾಗಿದ್ದನಂತೆ.
ಈ ನಡುವೆ ವಿವಾಹೇತರ ಸಂಬಂಧ ಹೆಚ್ಚಾಗಿಯೇ ಮುಂದುವರೆದಿತ್ತು. ಗಂಡ ಇಬ್ಬರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಿದ್ದಾನೆ ಅಂತ ಯೋಚನೆ ಮಾಡಿದ್ದ ನಾರಾಯಣಗೌಡ ಅನಿತಾ ಜೊತೆ ಸೇರಿ ವಿನೋದ್ ಹತ್ಯೆಗೆ ಸಂಚು ರೂಪಿಸಿದ್ದ ಎನ್ನಲಾಗ್ತಿದೆ. ಅದರಂತೆ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ನಾರಾಯಣಗೌಡ ತನ್ನ ಸಹಚರ ರಾಜುಗೆ ವಿನೋದ್ ಆಟೋದಲ್ಲಿ ಪ್ಯಾಸೆಂಜರ್ ರೀತಿ ತೆರಳುವಂತೆ ಹೇಳಿದ್ದಾನೆ. ಮೊದಲೇ ಪ್ಲಾನ್ ಮಾಡಿದಂತೆ ಹರಿತವಾದ ಆಯುಧ ಇಟ್ಕೊಂಡು ಆಟೋವೇರಿದ್ದ. ವಾಹನ ಚಲಿಸುತ್ತಿರುವಾಗಲೇ ಆಟೋ ಓಡಿಸುತ್ತಿದ್ದ ವಿನೋದ್ ಕತ್ತಿಗೆ ರಾಜು ಮಾರಕಾಸ್ತ್ರದಿಂದ ಕುಯ್ದು, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಆರೋಪಿ ರಾಜು ಆಂಧ್ರದ ವಿಜಯವಾಡಕ್ಕೆ ತೆರಳಿರೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಆರೋಪಿ ಕಂ ಅನಿತಾ ಪ್ರಿಯಕರ ನಾರಾಯಣಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಡಿಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.