ಬೆಂಗಳೂರು: ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಆರೋಪಿ ಕೃಷ್ಣನು ಮಹೇಶ್ನನ್ನು ಸಂಧಾನ ನೆಪದಲ್ಲಿ ಕರೆಸಿ, ಕಂಠಪೂರ್ತಿ ಕುಡಿಸಿ ಕೊಲೆ ಮಾಡಿರುವ ವಿಚಾರ ಬಯಲಾಗಿದೆ.
ಕೊಲೆಯಾದ ಮಹೇಶ್ ನಾಗಮಂಗಲ ಹಾಗೂ ಬೆಂಗಳೂರಿನಲ್ಲಿ ಲಾಡ್ಜ್ ನಡೆಸುತ್ತಿದ್ದ, ಇದರಿಂದ ಸಾಕಷ್ಟು ಆಸ್ತಿ ಸಂಪಾದಿಸಿದ್ದ. ಹಲವರಿಗೆ ಬಡ್ಡಿಗೆ ಹಣ ಕೊಟ್ಟು ನಂತರ ವಸೂಲಿಗಾಗಿ ಕಿರುಕುಳ ಕೊಡುತ್ತಿದ್ದನಂತೆ. ಆರೋಪಿ ಕೃಷ್ಣ ಕೂಡ ಮಹೇಶ್ ಬಳಿ ಹಣ ಪಡೆದಿದ್ದ. ಹಣ ನೀಡಿದ ಮಹೇಶ್ ವಾಪಸ್ ಕೊಡುವಂತೆ ಕೃಷ್ಣಗೆ ಕಿರುಕುಳ ಕೊಡುತ್ತಿದ್ದ. ಹೀಗಾಗಿ, ಮಹೇಶ್ ಕೊಲೆಗೆ ಯೋಜನೆ ರೂಪಿಸಿದ್ದ ಕೃಷ್ಣ, ದೇಹ ಸಿಗದಂತೆ ಮಾಡಲು ಕಿಡ್ನಾಪ್ ಸಂಚು ರೂಪಿಸಿದ್ದ.
ಇದನ್ನೂ ಓದಿ : ಪಾರ್ಟಿ ಹೆಸರಲ್ಲಿ ಸ್ನೇಹಿತನ ಕೊಲೆ ಮಾಡಿ ಮಣ್ಣು ಮಾಡಿದ್ರು.. ಬಳಿಕ ತಾವೇ ಬಂದು ಶರಣಾದರು
ಕೊಲೆಯಾಗುವ ಹಿಂದಿನ ದಿನ ಹಣ ವಾಪಸ್ ಕೊಡುವಂತೆ ಸುಮಾರು 20 ರಿಂದ 30 ಬಾರಿ ಮಹೇಶ್, ಕೃಷ್ಣನಿಗೆ ಕರೆ ಮಾಡಿದ್ದ. ಹಣ ಕೊಡದಿದ್ದರೆ, ಊಹಿಸಲಾಗದ ರೀತಿಯಲ್ಲಿ ಕೊಲೆಯಾಗ್ತೀಯ ಎಂದು ಆವಾಜ್ ಕೂಡ ಹಾಕಿದ್ದನಂತೆ. ಇದರಿಂದ ರೊಚ್ಚಿಗೆದ್ದ ಕೃಷ್ಣ, ಮಹೇಶ್ ಕೊಲೆಗೆ ಪಕ್ಕಾ ಪ್ಲಾನ್ ಮಾಡಿ ಅ.21 ರಂದು ಸಂಜೆ ಸುಮಾರು 6:30 ರ ವೇಳೆಗೆ ಮಹೇಶ್ಗೆ ಕರೆ ಮಾಡಿ, "ನಮ್ಮಲ್ಲೆ ಯಾಕೆ ಗಲಾಟೆ, ಬನ್ನಿ ಮಾತನಾಡಿ ಡಿಸೈಡ್ ಮಾಡೋಣ" ಎಂದು ಹೇಳಿದ್ದ. ರೆಡಿಯಾಗಿರು ಕಾರ್ನಲ್ಲಿ ಬರ್ತೀವಿ, ಮಾತನಾಡೋಣ ಎಂದು ಮಹೇಶ್ ಕೂಡ ಹೇಳಿದ್ದ.
ಹೇಳಿದಂತೆ ಕಾರಿನಲ್ಲಿ ಬಂದ ಮಹೇಶ್ನನ್ನು, ಕೃಷ್ಣ ಮತ್ತು ಆತನ ಸಹಚರರು ಹೆಸರುಘಟ್ಟದ ಬಳಿ ಕರೆದೊಯ್ದಿದ್ದಾರೆ. ಕಾರಿನಲ್ಲಿ ಹೋಗುತ್ತಿರುವಾಗಲೇ ತೋಟದಲ್ಲಿ ಹಳ್ಳ ತೋಡೋಕೆ ಕೆಲಸಗಾರರಿಗೆ ಹೇಳಿದ್ದ. ಹೀಗಾಗಿ, ಕೆಲಸಗಾರ ಸಂತೋಷ್ ಮತ್ತು ಇತರ ಇಬ್ಬರು ತೋಟದಲ್ಲಿ ಹಳ್ಳ ತೋಡಿದ್ದರು. ಹೆಸರುಘಟ್ಟ ತೋಟದ ಮನೆಗೆ ತಲುಪಿದ ಬಳಿಕ, ಕೆಲಸಗಾರರನ್ನ ಮಹೇಶ್ಗೆ ಪರಿಚಯಿಸಿ ನಂತರ ಊಟ ಮಾಡೋಣ ಎಂದು ಡ್ರಿಂಕ್ಸ್ ರೆಡಿ ಮಾಡಿಸಿದ್ದರು. ಈ ವೇಳೆ ಮಹೇಶ್ ಕುಡಿಯಲ್ಲ ಎಂದಾಗ ಬಲವಂತವಾಗಿ ಕಂಠ ಪೂರ್ತಿ ಕುಡಿಸಿದ್ದಾರೆ. ಮೊದಲೇ ಕೋಪದಲ್ಲಿದ್ದ ಕೃಷ್ಣ, ಕುಡಿದ ಮತ್ತಿನಲ್ಲಿದ್ದ ಮಹೇಶ್ ತಲೆಗೆ ಮಚ್ಚಿನಿಂದ ಹೊಡೆದಿದ್ದ. ಮಹೇಶ್ ಸತ್ತೋದ ಎಂದು ಖಾತ್ರಿಯಾದ ಬಳಿಕ, ಹಳ್ಳದಲ್ಲಿ ಹೂತು ಹಾಕಿ ಸ್ಥಳದಿಂದ ಕಾಲ್ಕಿತ್ತಿದ್ದರು. ಈ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಕೃಷ್ಣ ಬಾಯ್ಬಿಟ್ಟಿದ್ದಾನೆ. ಕೃಷ್ಣ ನೀಡಿದ ಮಾಹಿತಿ ಪ್ರಕಾರ, ಹೂತು ಹಾಕಿದ್ದ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದು, ತನಿಖೆ ಮುಂದುವರೆಸಿದ್ದಾರೆ.
ಆರೋಪಿ ಕೃಷ್ಣ 19 ವರ್ಷದವನಿರುವಾಗಲೇ ರೌಡಿ ಶೀಟ್ನಲ್ಲಿದ್ದ. ರಾಜಗೋಪಾಲ ನಗರದಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎನ್ನಳಾಗ್ತಿದೆ.