ಬೆಂಗಳೂರು: ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಸಣ್ಣ ಪುಟ್ಟ ಆಕ್ಸಿಡೆಂಟ್ಗಳು ಸರ್ವೇ ಸಾಮಾನ್ಯವಾಗಿವೆ. ಬೈಕ್, ಕಾರು, ಆಟೋಗಳು ಟಚ್ ಮಾಡಿಕೊಂಡು ಸವಾರರು ರಸ್ತೆಯಲ್ಲೇ ಗಲಾಟೆ ಮಾಡಿಕೊಳ್ಳುತ್ತಾರೆ. ಇದೇ ರೀತಿ ಎರಡು ಬೈಕ್ಗಳ ನಡುವೆ ಸಣ್ಣ ಅಪಘಾತವಾಗಿದ್ದು, ಇಬ್ಬರು ಸವಾರರು ರಸ್ತೆಯಲ್ಲಿ ಗಲಾಟೆ ಮಾಡಿಕೊಂಡಿದ್ದರು. ಆದರೆ, ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಹೀಗೆ ಬೈಕ್ ಗಲಾಟೆಯಲ್ಲಿ ಕೊಲೆಯಾದ ವ್ಯಕ್ತಿ ಹೆಸರು ಕೃಷ್ಣಪ್ಪ. ನಗರದ ವೈಯಾಲಿ ಕಾವಲ್ ನಿವಾಸಿಯಾದ ಕೃಷ್ಣಪ್ಪ ಬಿಪಿ ಮತ್ತು ಶುಗರ್ನಿಂದ ಬಳಲುತ್ತಿದ್ದರು. ಮನೆಯಲ್ಲಿದ್ದ ಮಾತ್ರೆ ಖಾಲಿಯಾಗಿದೆ ಅಂತಾ ನವೆಂಬರ್ 15 ರ ರಾತ್ರಿ 8.30 ರ ಸುಮಾರಿಗೆ ಬೈಕ್ನಲ್ಲಿ ಮೆಡಿಕಲ್ ಸ್ಟೋರ್ಗೆ ಹೊರಟಿದ್ದರು. ವೈಯಾಲಿಕಾವಲ್ನ ಕೆಂಪಣ್ಣ ಲೇಔಟ್ ಬಳಿ ಕೃಷ್ಣಪ್ಪ ಅವರ ಬೈಕ್ಗೆ ಸರ್ಫರಾಜ್ ಖಾನ್ ಎಂಬಾತ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ.
ಈ ವೇಳೆ, ಆಯಾ ತಪ್ಪಿ ಕೃಷ್ಣಪ್ಪ ನೆಲದ ಮೇಲೆ ಬಿದ್ದಿದ್ದಾರೆ. ನಂತರ ಬೈಕ್ ಸವಾರನಿಗೆ ನೋಡಿಕೊಂಡು ಬರೋಕೆ ಆಗಲ್ವಾ ಅಂತಾ ಕೃಷ್ಣಪ್ಪ ಬೈದು ಬುದ್ದಿ ಹೇಳಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ಮತ್ತೊಬ್ಬ ಬೈಕ್ ಸವಾರ ಸರ್ಫರಾಜ್ ಖಾನ್, ರಸ್ತೆ ಬದಿ ಇದ್ದ ಕಲ್ಲಿನಿಂದ ಕೃಷ್ಣಪ್ಪ ತಲೆ ಒಡೆದು ಎಸ್ಕೇಪ್ ಆಗಿದ್ದಾನೆ.
ನಂತರ ಅಲ್ಲಿದ್ದ ಸ್ಥಳೀಯರು ಅಪಘಾತವಾಗಿದೆ ಅಂತಾ ಗಾಯಾಳು ಕೃಷ್ಣಪ್ಪನನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಎರಡು ದಿನಗಳ ನಂತರ ಗಾಯಾಳು ಕೃಷ್ಣಪ್ಪ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆದರೆ, ಕೃಷ್ಣಪ್ಪ ಮಗ ಸತೀಶ್ ತಲೆಯಲ್ಲಿ ತಂದೆಯ ಸಾವಿನ ಬಗ್ಗೆ ಸಣ್ಣ ಅನುಮಾನ ಮೂಡಿತ್ತು. ಏಕೆಂದರೆ ತನ್ನ ತಂದೆ ಓಡಿಸುತ್ತಿದ್ದ ಬೈಕ್ಗೆ ಸಣ್ಣ ಡ್ಯಾಮೇಜ್ ಕೂಡ ಆಗಿರಲಿಲ್ಲ. ಆದರೆ, ತಂದೆ ತಲೆಗೆ ಮಾತ್ರ ಗಂಭೀರ ಗಾಯವಾಗಿತ್ತು. ಆದ್ದರಿಂದ ಸತೀಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ, ಒಬ್ಬ ವ್ಯಕ್ತಿ ಕೃಷ್ಣಪ್ಪ ಮೇಲೆ ಹಲ್ಲೆ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಕಂಡಿದೆ. ಕೂಡಲೇ ಪೊಲೀಸರನ್ನು ಸಂಪರ್ಕಿಸಿದ ಸತೀಶ್ ಹಲ್ಲೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಿ ತನಿಖೆ ನಡೆಸಿದ ಪೊಲೀಸರು ಸರ್ಫರಾಜ್ ಖಾನ್ನನ್ನ ಬಂಧಿಸಿದ್ದಾರೆ.
ಬಂಧಿತ ಆರೋಪಿ ಸರ್ಫರಾಜ್ ವೆಲ್ಡಿಂಗ್ ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ. 15 ರಂದು ರಾತ್ರಿ ವೈಯಾಲಿ ಕಾವಲ್ ಕಡೆ ವೇಗವಾಗಿ ಬೈಕ್ನಲ್ಲಿ ಹೋಗಿ ಕೃಷ್ಣಪ್ಪನ ಬೈಕ್ಗೆ ಡಿಕ್ಕಿ ಹೊಡೆದಿದ್ದನಂತೆ. ಸದ್ಯ ವೈಯಾಲಿಕಾವಲ್ ಪೊಲೀಸರು ಆಕ್ಸಿಡೆಂಟ್ ಕೇಸನ್ನ ಕೊಲೆ ಕೇಸಾಗಿ ಪರಿವರ್ತಿಸಿ ತನಿಖೆ ಕೈಗೊಂಡಿದ್ದಾರೆ. ಅದೇನೇ ಇರಲಿ ಬೈಕ್ ಟಚ್ ಆದ ಸಣ್ಣ ವಿಚಾರಕ್ಕೆ ಉಂಟಾದ ಗಲಾಟೆ ವೃದ್ದ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದ್ದು, ದುರ್ದೈವವೇ ಸರಿ.
ಇದನ್ನೂ ಓದಿ : ಬೆಂಗಳೂರು: ಸತ್ತಂತೆ ಬಿಂಬಿಸಿಕೊಂಡು ತಲೆಮರೆಸಿಕೊಂಡಿದ್ದ ರೌಡಿ ಕೊನೆಗೂ ಅರೆಸ್ಟ್