ಬೆಂಗಳೂರು: ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಣೇಶ್ ಎಂಬಾತನ ಕೊಲೆ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶರತ್ ಕುಮಾರ್, ಅಜಿತ್ ಕುಮಾರ್, ಜಾನ್, ಶರವಣ ಹಾಗೂ ಸತ್ಯ ಬಂಧಿತರು.
ಮೃತ ಗಣೇಶ್ ಹಾಗೂ ಬಂಧಿತ ಆರೋಪಿಗಳೆಲ್ಲರೂ ಪರಿಚಯಸ್ಥರಾಗಿದ್ದು, ಒಂದೇ ಏರಿಯಾದ ನಿವಾಸಿಗಳು. 2020ರಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ಬಿಕ್ಕಟ್ಟು ಹಿನ್ನೆಲೆ ಊಟ-ತಿಂಡಿ ಹಂಚಿಕೆ ವಿಚಾರದಲ್ಲಿ ಇವರ ನಡುವೆ ಮಾತಿನ ಚಕಮಕಿ ನಡೆದು ಮಾರಾಮಾರಿ ನಡೆದಿತ್ತು.
ಈ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು. ಹಲವು ದಿನಗಳಿಂದ ಗಣೇಶ್ ಹತ್ಯೆಗೆ ಸಂಚು ರೂಪಿಸುತ್ತಿದ್ದ ಆರೋಪಿಗಳು ನಿನ್ನೆ ಬೆಳಗ್ಗೆ ಹೊಂಡಾ ಆಕ್ಟೀವಾ ಸ್ಕೂಟರ್ನಲ್ಲಿ ಹೋಗುತ್ತಿರುವಾಗ ಆಟೋದಲ್ಲಿ ಹಿಂಬಾಲಿಸಿ ನಟರಾಜ್ ಥಿಯೇಟರ್ ಬಳಿ ಸ್ಕೂಟರ್ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಗಣೇಶ್ ಮೃತಪಟ್ಟಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಕೋಲಾರ ಗಡಿಭಾಗದಲ್ಲಿ ಬಂಧಿಸಿ ಕರೆತಂದಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹಾಡಹಗಲೇ ಮಾರಕಾಸ್ತ್ರಗಳಿಂದ ವ್ಯಕ್ತಿ ಮೇಲೆ ಮಾರಾಣಾಂತಿಕ ಹಲ್ಲೆ