ಬೆಂಗಳೂರು: ಮನೆಯ ಟೆರೆಸ್ ಮೇಲೆ ವ್ಯಕ್ತಿಯೊಬ್ಬನ ಮರ್ಮಾಂಗವನ್ನು ಕತ್ತರಿಸಿ ಕೊಲೆಗೈದಿರುವ ಘಟನೆ ಯಲಹಂಕ ಬಳಿಯ ಕೊಂಡಪ್ಪ ಲೇಔಟ್ ನಲ್ಲಿ ಶುಕ್ರವಾರ ರಾತ್ರಿ ನಡೆದಿರುವುದು ಬೆಳಕಿಗೆ ಬಂದಿದೆ.
ಚಂದ್ರಶೇಖರ್ ಎಂಬುವರು ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಸುಮಾರು ಎಂಟು ವರ್ಷಗಳ ಹಿಂದೆ ಹೆಂಡತಿಯ ಸಮೇತ ಬೆಂಗಳೂರಿಗೆ ಬಂದಿದ್ದರು. ಮೂರು ತಿಂಗಳಿನಿಂದ ಯಲಹಂಕದ ಕೊಂಡಪ್ಪ ಲೇಔಟ್ನಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಚಂದ್ರಶೇಖರ್ ತಲೆ, ಮರ್ಮಾಂಗಕ್ಕೆ ಜಜ್ಜಿ ಕೊಲೆ ಮಾಡಲಾಗಿದೆ.
ಪ್ರಾಥಮಿಕ ತನಿಖೆಯ ವೇಳೆ ಮೃತನ ಬಾಮೈದ ಲೊಕೇಶ್ ಮೇಲೆ ಶಂಕೆ ವ್ಯಕ್ತವಾಗಿದೆ. ಲೋಕೇಶ್ ಕೊಲೆಯಾದ ಚಂದ್ರಶೇಖರ ಅವರ ಪತ್ನಿ (ಸಂಬಂಧದಲ್ಲಿ ಅಕ್ಕ ಎನ್ನಿಸಿಕೊಳ್ಳುವ) ಹಿಂದೆ ಲೊಕೇಶ್ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದರು. ಇವರ ಕಾಟಕ್ಕೆ ಬೇಸತ್ತು ಹಿಂದೂಪುರ ಠಾಣೆಯಲ್ಲಿ ದಂಪತಿ ದೂರು ನೀಡಿದ್ದರು. ಈ ವೇಳೆ ಠಾಣೆಯ ಬಳಿಯೇ ಲೋಕೇಶ್ಗೆ ಅಕ್ಕ ಚಪ್ಪಲಿಯಲ್ಲಿ ಹೊಡೆದಿದ್ದರು. ಹೀಗಾಗಿ ಲೋಕೇಶ್ ಮೇಲೆ ಶಂಕೆ ವ್ಯಕ್ತವಾಗಿದೆ ಎಂದು ಪ್ರಕರಣದ ಕುರಿತು ಆಗ್ನೇಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದಾರೆ.
ಇನ್ನೊಂದು ಆಯಾಮದಲ್ಲಿ ಹೆಂಡತಿಯೇ ತನ್ನ ಸ್ನೇಹಿತನ ಜೊತೆ ಸೇರಿ ಕೊಲೆ ಮಾಡಿರುವ ಕುರಿತೂ ಕೂಡಾ ಶಂಕೆ ವ್ಯಕ್ತವಾಗಿದೆ. ಸದ್ಯ ಕೊಲೆಯಾದ ವ್ಯಕ್ತಿಯ ಹೆಂಡತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದೇವೆ. ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಅನೂಪ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಅಕ್ರಮ ಚಿನ್ನ ಸಾಗಣೆಯ ಪ್ರತ್ಯೇಕ ಪ್ರಕರಣ: 1.59 ಕೋಟಿ ಮೌಲ್ಯದ ಚಿನ್ನ ವಶ