ಬೆಂಗಳೂರು: ಬೆಂಗಳೂರಿಗೆ ಬಂದಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನ 1,200 ಕಿಮೀ ಚೇಸ್ ಮಾಡಿ ಸಿನಿಮಾ ರೀತಿಯಲ್ಲಿ ಅಂದರ್ ಮಾಡುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಶಿವಶಂಕರ ಶರ್ಮಾ ಎಂದು ಗುರುತಿಸಲಾಗಿದೆ.
ಆರೋಪಿ ಶಿವಶಂಕರ್ ಗಾರ್ಮೆಂಟ್ ಎಕ್ಸ್ಪೋರ್ಟ್ ಕಂಪನಿಯ ಮೊಹಮ್ಮದ್ ಎಥೆಶಾಮ್ ಅಸ್ಲಾಮ್ ನವಿಲಾಲ ಎಂಬುವವರಿಗೆ, ನಾನು ಹಿರಿಯ ಐಪಿಎಸ್ ಅಧಿಕಾರಿ ಎಂದು ಬೆದರಿಕೆ ಹಾಕಿದ್ದಾನೆ. ನಿಮ್ಮ ಮೇಲೆ ರಪ್ತು ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಅದನ್ನ ಇತ್ಯರ್ಥಗೊಳಿಸುವುದಾಗಿ ಹೇಳಿ ಅವರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.
ಹಣಕೊಡಲು ನಿರಾಕರಿಸಿದಾಗ ಮುಂಬೈನ ಮರೈನ ಡ್ರೈವ್ನ ಪ್ರತಿಷ್ಠಿತ ಹೋಟೆಲ್ಗೆ ಬರಮಾಡಿಕೊಂಡು ಅಕ್ರಮವಾಗಿ ಕೂಡಿ ಹಾಕಿ 16 ಲಕ್ಷ ಲಪಟಾಯಿಸಿದ್ದಾನೆ.
ಹೀಗಾಗಿ ಕಿಡ್ನಾಪ್ಗೆ ಒಳಗಾದವರು ಗುಜರಾತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ನಂತರ ಮುಂಬೈ ಕ್ರೈಂ ಪೊಲೀಸರಿಗೆ ಪ್ರಕರಣ ಹಸ್ತಾಂತರವಾಗಿತ್ತು. ಮುಂಬೈ ಪೊಲೀಸರು ಆರೋಪಿಯ ಜಾಡು ಪತ್ತೆ ಮಾಡಿ, ರಸ್ತೆ ಮೂಲಕ ಪರಾರಿಯಾಗಲು ಯತ್ನಿಸಿದ್ದ ಶಿವಶಂಕರ್ನನ್ನು ಸುಮಾರು 1200 ಕಿ.ಮಿ ಬೆನ್ನಟ್ಟಿ ಸಿಲಿಕಾನ್ ಸಿಟಿಯಲ್ಲಿ ಖೆಡ್ಡಾಕ್ಕೆ ಕೆಡವಿದ್ದಾರೆ.
ಆರೋಪಿಯನ್ನು ಬಂಧಿಸಿದ ಪೊಲೀಸರು ಮುಂಬೈ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.