ಬೆಂಗಳೂರು: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಉದ್ದಟತನದ ಹೇಳಿಕೆ ಸಹಿಸಲ್ಲ ಎಂದು ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಾಯಿ ಭುವನೇಶ್ವರಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ಬೆಳಗಾವಿ, ನಿಪ್ಪಾಣಿ, ಕಾರವಾರದ ತಂಟೆಗೆ ಬಂದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಕಾಡುಗೊಲ್ಲ, ವೀರಶೈವ ಲಿಂಗಾಯಿತ ಮತ್ತು ಮರಾಠ ಜನಾಂಗದ ಅಭಿವೃದ್ದಿಗಾಗಿ ನಿಗಮ ಮಾಡಲಾಗಿದೆ. ಇದರ ಬಗ್ಗೆ ಕಾಂಗ್ರೆಸ್ ನಾಯಕರು ಹತಾಶೆಯಿಂದ ಅಪಸ್ವರ ಎತ್ತುವುದು ಬೇಡ. ಹಿಂದೆ ಧರ್ಮ ಒಡೆಯುವ ಪ್ರಯತ್ನ ಮಾಡಿ ಅವರು ಅನುಭವಿಸಿದ್ದಾಗಿದೆ. ಜನಾಂಗದ ಸ್ವಾಮೀಜಿಗಳು ಹೇಳಿಕೆ ಕೊಟ್ಟರೆ ತಪ್ಪೇನಿಲ್ಲ ಎಂದರು.
ದಾವಣಗೆರೆ ಮಧ್ಯ ಕರ್ನಾಟಕದಲ್ಲಿದ್ದು, ರಾಜಧಾನಿಯಾಗುವ ಎಲ್ಲ ಅರ್ಹತೆಯೂ ಇದೆ. ಹಾಗಾಗಿ ದಾವಣಗೆರೆಗೆ ಸಚಿವ ಸ್ಥಾನ ಕೊಡಬೇಕೆಂದು ಸಿಎಂ ಹಾಗೂ ವರಿಷ್ಠರಿಗೆ ಮನವಿ ಮಾಡಲಾಗಿದ್ದು, ಸಿಎಂ ನಿರ್ಧಾರಕ್ಕೆ ನಾವು ಬದ್ದ ಎಂದು ಹೇಳಿದರು.