ಬೆಂಗಳೂರು: ಬಿಜೆಪಿಯಲ್ಲಿ ಸಿಡಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಸಂಬಂಧಪಟ್ಟದ್ದು ಎನ್ನಲಾದ ಸಿಡಿ ಚರ್ಚೆಗೆ ಬಂದಿದ್ದು, ಆತಂಕದಿಂದ ಅವರು ದೆಹಲಿ ನಾಯಕರ ಭೇಟಿಗೆ ತೆರಳಿದ್ದಾರೆ. ಸ್ವ ಪಕ್ಷೀಯರಿಂದಕೇ ಷಡ್ಯಂತ್ರ ನಡೆಸಲಾಗಿದೆ ಎಂದು ದೂರು ನೀಡಲು ತೆರಳಿದ್ದಾರೆ ಎಂದು ಹೇಳಲಾಗ್ತಿದೆ.
ದೆಹಲಿಗೆ ತೆರಳದಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದರೂ ಕೊನೆ ಕ್ಷಣದಲ್ಲಿ ನಿಲುವು ಬದಲಿಸಿ ದಿಢೀರ್ ರೇಣುಕಾಚಾರ್ಯ ದೆಹಲಿಗೆ ತೆರಳಿರೋದು ಅನುಮಾನಕ್ಕೆ ಕಾರಣ ಆಗಿದೆ. ವಿಧಾನಸೌಧದಲ್ಲಿ ಕೆಲವರು ರೇಣುಕಾಚಾರ್ಯಗೆ ಸಿಡಿ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ. ಅದೇ ಕಾರಣಕ್ಕೆ ಆತಂಕಗೊಂಡು ದೆಹಲಿಗೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ:BSY ಬೇಡ ಅಂದ್ರೂ ದೆಹಲಿಗೆ ತೆರಳಿದ ರೇಣುಕಾಚಾರ್ಯ... ಬಿಜೆಪಿಯಲ್ಲಿ ಸಂಚಲನ!
'ಷಡ್ಯಂತ್ರದ ಮಾಹಿತಿ ಇಲ್ಲ'
ಷಡ್ಯಂತ್ರದ ಮಾಹಿತಿ ಇಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಷಡ್ಯಂತ್ರ ನಡೆದಿದೆ ಎನ್ನುವುದು ಗೊತ್ತಿಲ್ಲ. ಒಂದು ವೇಳೆ ನಡೆದಿದ್ದರೆ ಷಡ್ಯಂತ್ರ ಮಾಡಿದವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಮಾರ್ಮಿಕವಾಗಿ ನುಡಿದರು.
'ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡುತ್ತೇನೆ'
ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿ ಸಂಬಂಧ ದೆಹಲಿಗೆ ಬಂದಿದ್ದೇನೆ. ಕೇಂದ್ರ ಸಚಿವರನ್ನು ಭೇಟಿಯಾಗುತ್ತೇನೆ. ಸಾಧ್ಯವಾದರೆ ರಾಜ್ಯ ಉಸ್ತುವಾರಿಯನ್ನೂ ಭೇಟಿಯಾಗುತ್ತೇನೆ, ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಏನನ್ನೂ ಹೇಳಿಲ್ಲ, ಹೈಕಮಾಂಡ್ ನಾಯಕರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಇಂದು ಯಾವ ನಾಯಕರು ಸಿಗುತ್ತಾರೋ ಅವರನ್ನು ಭೇಟಿಯಾಗುತ್ತೇನೆ. ನನ್ನ ಕ್ಷೇತ್ರದ ಯೋಜನೆಗಳ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.