ಬೆಂಗಳೂರು : ಕಾವೇರಿ ವಿವಾದದ ವಿಚಾರದಲ್ಲಿ ಪ್ರಧಾನಿ ಅವರನ್ನು ಎಳೆದು ತರುವುದು ಬೇಡ, ತಮಿಳುನಾಡಿನವರು ಸುಪ್ರೀಂ ಕೋರ್ಟ್ ಮೂಲಕವೇ ನ್ಯಾಯ ಕೇಳುತ್ತಿದ್ದಾರೆ. ಹಾಗೆ ನಾವು ನಮ್ಮ ವಾದವನ್ನು ಬಲವಾಗಿ ಮಂಡಿಸಿ ನ್ಯಾಯವನ್ನು ಪಡೆದುಕೊಳ್ಳಬೇಕು ಎಂದು ಮೋದಿ ಮಧ್ಯಪ್ರವೇಶಿಸಬೇಕೆಂಬ ಸರ್ಕಾರದ ಬೇಡಿಕೆಗೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಎನ್ಡಿಐಎ ಎಂದು ಒಕ್ಕೂಟ ಮಾಡಿಕೊಂಡು ಮೂರು ಮೂರು ಸಭೆ ಮಾಡುತ್ತಾರೆ. ಬೆಂಗಳೂರಲ್ಲೂ ಸಭೆ ಮಾಡುತ್ತಾರೆ. ತಮಿಳುನಾಡು ಸಿಎಂ ಸ್ಟಾಲಿನ್ಗೆ ಒಂದು ಫೋನ್ ಮಾಡಿ ಮಾತನಾಡಬಹುದಲ್ವಾ? ಪ್ರಧಾನಿಯವರು ಯಾಕೆ ಬೇಕು ? ಎರಡು ರಾಜ್ಯಗಳ ಮಧ್ಯೆ ವಿವಾದ ಇರುವುದಲ್ಲವೇ? ಅಂತಾರಾಜ್ಯ ನೀರು ವಿವಾದವನ್ನು ಸಿಡಬ್ಲ್ಯೂಆರ್ಸಿ, ಸಿಡಬ್ಲ್ಯೂಎಂಎ ಮುಖಾಂತರ ತೀರ್ಮಾನ ಮಾಡಿಕೊಳ್ಳಬೇಕು. ಸುಪ್ರೀಂಕೋರ್ಟ್ ಈ ಬಗ್ಗೆ ತೀರ್ಮಾನ ಮಾಡುವುದು. ಕೇಂದ್ರ ಸರ್ಕಾರದ ಪ್ರತಿನಿಧಿಗಳಾಗಿ ರಾಜ್ಯದ ಹಿತಾಸಕ್ತಿ ಕಾಪಾಡುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ಸರ್ವ ಪಕ್ಷಗಳ ಸಭೆ ನಡೆಸಿ ಚರ್ಚೆ ಮಾಡಿದ್ದಾರೆ. ನಮ್ಮ ಪಕ್ಷದಿಂದಲೂ ಮೂರ್ನಾಲ್ಕು ಸಂಸದರು ಭಾಗಿಯಾಗಿದ್ದೆವು. ಎಲ್ಲರೂ ಅವರವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಸಿಡಬ್ಲ್ಯೂಆರ್ಸಿ
ಸೆಪ್ಟೆಂಬರ್ 12 ರಿಂದ ಮುಂದಿನ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುವಂತೆ ಆದೇಶ ಹೊರಡಿಸಿದೆ. ನಾಳೆ ಬಹುಶಃ ಸಿಡಬ್ಲ್ಯೂಆರ್ಸಿ ಸಭೆ ತೀರ್ಮಾನವನ್ನು ತಡೆ ಹಿಡಿಯುವ ಸಾಧ್ಯತೆ ಇದೆ. ಇದರ ವಿಚಾರವಾಗಿ ಸುಪ್ರೀಂ ಕೋರ್ಟ್ನಲ್ಲಿ 21ರಂದು ವಿಚಾರಣೆಯಿದೆ ಎಂದು ಹೇಳಿದರು.
ತಮಿಳುನಾಡಿನವರು ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿದ್ದಾರೆ. ಈ ಸಂಬಂಧ ಸಭೆಯಲ್ಲಿ ಚರ್ಚೆ ನಡೆದಿದೆ. ನಾವು ಸಿಎಂ ಅವರಿಗೆ ರಾಜ್ಯದ ಜನರ ಹಿತರಕ್ಷಣೆ ಮಾಡುವಂತೆ ಹೇಳಿದ್ದೇವೆ. ನಾವು ಅದಕ್ಕೆ ಬದ್ಧರಾಗಿದ್ದೇವೆ. ಆದರೆ 5 ಸಾವಿರ ಕ್ಯೂಸೆಕ್ ನೀರು ಬಿಡುವ ತೀರ್ಮಾನ ಬೇಡ. ನಮಗೆ ನೀರಿಲ್ಲ, ಸ್ಟಾಂಡಿಂಗ್ ಕ್ರಾಫ್ಟ್ ಇದೆ. ಎಷ್ಟೋ ಕಡೆ ನಾಟಿ ಕೆಲಸನೇ ಆಗಿಲ್ಲ, ಬೆಂಗಳೂರು ಮೈಸೂರು ಮಂಡ್ಯ ಚಾಮರಾಜನಗರಕ್ಕೆ ಪ್ರತಿದಿನ 1 ಸಾವಿರ ಕ್ಯೂಸೆಕ್ ನೀರು ಬೇಕು. ಮಳೆ ಬರೋ ಲಕ್ಷಣವೂ ಕಾಣುತ್ತಿಲ್ಲ. ಬೆಂಗಳೂರಿಗೆ 12 ಟಿಎಂಸಿ ನೀರು ಬೇಕಿದೆ. ಹಾಗಾಗಿ ಸಿಡಬ್ಲ್ಯೂಆರ್ಸಿ ತೀರ್ಮಾನಕ್ಕೆ ಅನುಮೋದನೆ ಕೊಡಬಾರದು, ಸುಪ್ರೀಂ ಕೋರ್ಟ್ಗೆ ಮತ್ತೊಂದು ಅರ್ಜಿ ಹಾಕಿ ಎಂದು ಸ್ಪಷ್ಟಪಡಿಸಿದ್ದೇವೆ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಸಿಡಬ್ಲ್ಯೂಆರ್ಸಿಗೆ ಸಿಡಬ್ಲ್ಯೂಎಂಎ ಇದೆ. 2018ರಲ್ಲಿ ಸುಪ್ರೀಂ ಕೋರ್ಟ್ ಫೈನಲ್ ತೀರ್ಪು ಕೊಟ್ಟಿದೆ. ಇದರಲ್ಲಿ ಪ್ರಧಾನಿಯವರನ್ನು ಎಳೆದು ತರುವುದು ಬೇಡ. ಇದರಲ್ಲಿ ರಾಜಕೀಯ ಬೇಡ. ಕರ್ನಾಟಕ ಹಿತರಕ್ಷಣೆ ವಿಚಾರಕ್ಕೆ ಬಂದರೆ ನಾವು ಇದ್ದೀವಿ. ಮೇಕೆದಾಟು ಯೋಜನೆಯಲ್ಲಿ ಇನ್ನೊಂದು ಡ್ಯಾಮ್ ಕಟ್ಟಬೇಕು ಎಂಬ ವಿಚಾರ ಬಂದರೆ ಸರ್ವ ಪಕ್ಷ ಸಭೆಯಲ್ಲಿ ಭಾಗಿಯಾಗುತ್ತೇವೆ. ನಮಗೂ ಕೂಡ ಅದೆ ಆಸೆ ಇದೆ. ನಮ್ಮ ರೈತರ ಹಿತರಕ್ಷಣೆ ಮುಖ್ಯ. ಸಿಡಬ್ಲ್ಯೂಆರ್ಸಿ ತೀರ್ಮಾನಕ್ಕೆ ನಮ್ಮ ವಿರೋಧವಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇದನ್ನೂ ಓದಿ : ಸರ್ವಪಕ್ಷ ಸಭೆ ಅಟೆಂಡ್ ಮಾಡೋಕೆ ಆಗಿಲ್ಲ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ