ಆನೇಕಲ್ (ಬೆಂಗಳೂರು): ಕೇಂದ್ರ ಸಚಿವ ಸಂಪುಟ ಸಭೆಗೆ ಗುರುವಾರ ಮುಹೂರ್ತ ನಿಗದಿಯಾಗಿದೆ ಎನ್ನಲಾಗಿದೆ. ಕರ್ನಾಟಕ ಸಂಸದರಿಗೂ ಸಚಿವಗಿರಿ ಸಿಗುವ ಮಾತುಗಳು ಕೇಳಿಬರುತ್ತಿವೆ.
ಈ ನಡುವೆ ಸಚಿವ ಸ್ಥಾನದ ಪಟ್ಟಿಯಲ್ಲಿರುವ ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣಸ್ವಾಮಿ ಪತ್ನಿ, ಮಕ್ಕಳೊಂದಿಗೆ ದೆಹಲಿಗೆ ತೆರಳಿದ್ದಾರೆ. ಮನೆಯಲ್ಲಿ ಕುಟುಂಬದವರೊಂದಿಗೆ ವಿಶೇಷ ಪೂಜೆ ನೆರವೇರಿಸಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಅವರು ಪ್ರಯಾಣಿಸಿದ್ದಾರೆ. ಮೋದಿ ಸರ್ಕಾರದ ಸಚಿವ ಸಂಪುಟ ಪುನರ್‌ರಚನೆ ಅಥವಾ ವಿಸ್ತರಣೆ ಚರ್ಚೆಯಲ್ಲಿ ಸಂಸದ ಎ.ನಾರಾಯಣಸ್ವಾಮಿ ಹೆಸರು ಕೂಡಾ ಕೇಳಿ ಬಂದಿತ್ತು.
ಆನೇಕಲ್‌ನಿಂದ ಬಡ ಕುಟುಂಬದಿಂದ ಬಂದಿದ್ದ ಚಮ್ಮಾರನ ಮಗನಾಗಿದ್ದ ಎ.ನಾರಾಯಣಸ್ವಾಮಿ ಸಾಕಷ್ಟು ಹೋರಾಟದ ಮೂಲಕ ಸಂಘ ಪರಿವಾರದಲ್ಲಿ ತೊಡಗಿಸಿಕೊಂಡಿದ್ದರು. ಬಿಜೆಪಿಯ ಕಟ್ಟಾಳು ಎಂದು ಹೆಸರುವಾಸಿಯಾಗಿದ್ದ ಇವರಿಗೆ ಬಿಜೆಪಿ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತ್ತು.
ಆನೇಕಲ್‌ನಿಂದ 4 ಬಾರಿ ಶಾಸಕರಾಗಿ ಒಂದು ಬಾರಿ ಸಮಾಜ ಕಲ್ಯಾಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ 2013ರ ವಿಧಾನಸಭೆ ಹಾಗೂ 2018ರ ವಿಧಾನಸಭೆಯಲ್ಲಿ ಸ್ಪರ್ಧಿಸಿ ಸೋಲು ಕಂಡ ಬಳಿಕ, 2019ರಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.
ಇದನ್ನೆಲ್ಲ ಪರಿಗಣಿಸಿರುವ ಕೇಂದ್ರ ಸರ್ಕಾರ ಮೋದಿ ಸಂಪುಟದಲ್ಲಿ ಎ. ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತ ಎನ್ನುವುದು ಖಾತ್ರಿಯಾಗಿದ್ದು, ಆನೇಕಲ್ ಹಾಗೂ ಚಿತ್ರದುರ್ಗ ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರುತ್ತಿದ್ದಾರೆ.
ಇದನ್ನೂ ಓದಿ: ಜುಲೈ 8ಕ್ಕೆ ಮೋದಿ ಸಂಪುಟ ಪುನರ್‌ರಚನೆ: ಕರ್ನಾಟಕಕ್ಕೆ ಸಿಗುವುದೇ ಸಚಿವ ಸ್ಥಾನ?