ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಕಾಲಿಟ್ಟಿದ್ದೇ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಕೊರೊನಾ ಸೋಂಕು ಜತೆ ಜತೆಗೆ ಹಲವು ಸಮಸ್ಯೆಗಳನ್ನು ತಂದಿಟ್ಟಿದೆ. ಕಳೆದ ಒಂದೂವರೆ ವರ್ಷದಿಂದ ಶಾಲಾ-ಕಾಲೇಜಿನಲ್ಲಿ ಭೌತಿಕ ತರಗತಿಗಳು ಶುರುವಾಗಿಲ್ಲ. ಪರಿಣಾಮ, ಮಕ್ಕಳ ಕಲಿಕೆಗಷ್ಟೇ ಪೆಟ್ಟು ಬಿದ್ದಿಲ್ಲ ಬದಲಿಗೆ ಮನಸ್ಸಿನ ಮೇಲೂ ತೀವ್ರ ಹಾನಿ ಮಾಡಿದೆ. ಇದರಿಂದಾಗಿ ಮಾನಸಿಕ ಖಿನ್ನತೆ ಹೆಚ್ಚಾಗಿ ಕಾಣಿಸಿಕೊಳ್ತಿದೆ.
ಅಷ್ಟೇ ಅಲ್ಲದೆ ಶಾಲಾ-ಕಾಲೇಜುಗಳು ಆರಂಭವಾಗದೇ ಯಾವುದೇ ಚಟುವಟಿಕೆಗಳು ಇಲ್ಲದ ಕಾರಣ ಮಕ್ಕಳಲ್ಲಿ ಸ್ಥೂಲಕಾಯ ಸಮಸ್ಯೆ ಅಂದರೆ ಬೊಜ್ಜಿನ ಸಮಸ್ಯೆಯು ಕಾಡುತ್ತಿದೆ. ಹೀಗಾಗಿ, ಕಲಿಕಾ ಉದ್ದೇಶದಿಂದ ಮಾತ್ರವಲ್ಲದೇ ಮಾನಸಿಕ ದೈಹಿಕ ಆರೋಗ್ಯದ ದೃಷ್ಟಿಯಿಂದ ಶಾಲೆ ಆರಂಭಿಸುವುದು ಸೂಕ್ತ.
ಈ ಕುರಿತು ರಾಧಾಕೃಷ್ಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ಮತ್ತು ನವಜಾತ ಶಿಶುಗಳ ತಜ್ಞರಾದ ಡಾ. ಬಿ. ಕೆ. ವಿಶ್ವನಾಥ್ ಭಟ್ ಮಾತನಾಡಿದ್ದು, ಕೋವಿಡ್ -19 ಕಾಯಿಲೆಗಿಂತ ಹೆಚ್ಚಾಗಿ ಶಾಲೆಗಳು ಆರಂಭವಾಗದೇ ಇರುವುದರಿಂದಲೇ ಮಕ್ಕಳಿಗೆ ತೊಂದರೆ ಆಗುತ್ತಿರುವುದನ್ನು ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಪರಿಗಣಿಸಿದ್ದಾರೆ. ಇದು ಎಲ್ಲ ಮಕ್ಕಳ ತಜ್ಞರ ಅನಿಸಿಕೆ ಕೂಡ ಆಗಿತ್ತು. ಕಳೆದೊಂದೂವರೆ ವರ್ಷದಿಂದ ಶಾಲೆಗಳು ಆರಂಭವಾಗದೇ, ಮಕ್ಕಳಲ್ಲಿ ಮಾನಸಿಕ ಖಿನ್ನತೆ, ಸ್ಥೂಲಕಾಯದಂತಹ ಸಮಸ್ಯೆಗಳು ಹೆಚ್ಚಾಗಿರುವುದನ್ನು ಗಮನಿಸಬಹುದು ಅಂತಾರೆ.
ಶಾಲೆಗಳಿಗೆ ಹೋಗುವುದು ಕೇವಲ ಕಲಿಕಾ ಉದ್ದೇಶದಿಂದ ಮಾತ್ರವಲ್ಲದೇ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ. ಆದರೆ ಇದು ಆಗದೇ ಇರುವುದಿಂದ ಡಿಪ್ರೆಶನ್ಗೆ ಹೋಗುತ್ತಿದ್ದಾರೆ. ವರ್ಷದಲ್ಲಿ ಎರಡು ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಾದ ಮಕ್ಕಳು, ಈಗ 10-12 ಕೆಜಿ ತೂಕ ಹೆಚ್ಚಿಸಿಕೊಳ್ಳುತ್ತಿರುವುದನ್ನ ನೋಡುತ್ತಿದ್ದೇವೆ ಅಂದರು. ಇದಷ್ಟೇ ಅಲ್ಲದೇ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯು ಮರುಕಳಿಸುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು.
ಮಕ್ಕಳ ಸನಿಹವಿರುವ ಎಲ್ಲರಿಗೂ ವ್ಯಾಕ್ಸಿನೇಷನ್ ಆಗಬೇಕು:
ಶಾಲೆಯಲ್ಲಿ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಸ್ಕೂಲ್ ಬಸ್ ಡ್ರೈವರ್ ಸೇರಿದಂತೆ ಮಕ್ಕಳ ಸಂಪರ್ಕಕ್ಕೆ ಬರುವ ಯಾರೇ ಆದರೂ ಅವರರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಆಗ ಮಕ್ಕಳಿಗೆ ರಕ್ಷಣೆ ಸಿಕ್ಕಂತೆ ಆಗುತ್ತದೆ.
ಇನ್ನು ಮೊದಲ ಹಾಗೂ ಎರಡನೇ ಅಲೆಯಲ್ಲಿ ಮಕ್ಕಳಿಗೂ ಸೋಂಕು ತಗುಲಿತ್ತು. ಮಕ್ಕಳಲ್ಲಿ ಸೋಂಕಿನ ತೀವ್ರತೆ ಕಡಿಮೆ ಇರುವುದನ್ನು ನಾವು ಗಮನಿಸಿದ್ದು, ಎ ಸಿಮ್ಟಾಮ್ಯಾಟಿಕ್ ಆಗಿರುತ್ತಾರೆ. ಹೀಗಾಗಿ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಹೆಚ್ಚು ಬಾಧಿಸಬಾರದು ಅಂದರೆ ಹಿರಿಯರೆಲ್ಲರೂ ಲಸಿಕೆ ಹಾಕಿಸಿಕೊಂಡಿರಬೇಕು. ಹಾಗೆಯೇ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವುದು ಅತ್ಯಗತ್ಯ ಅಂತ ತಿಳಿಸಿದರು.
ಇದನ್ನೂ ಓದಿ: ದಾವಣಗೆರೆಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ' ಎ- ನೆಕ್ ' ಕಾಯಿಲೆ ಪ್ರಕರಣ ಪತ್ತೆ