ಬೆಂಗಳೂರು: ನಗರದಲ್ಲಿಂದು 4373 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ನಿನ್ನೆ ಐದು ಸಾವಿರ ಗಡಿ ತಲುಪಿದ್ದ, ಕೋವಿಡ್ ಪ್ರಕರಣ ಇಂದು ಕೊಂಚ ಇಳಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 35,789 ಕ್ಕೆ ಏರಿಕೆಯಾಗಿದೆ. ಆದರೆ ದಿನೇ ದಿನೇ ಸಾವಿನ ಪ್ರಕರಣ ಹೆಚ್ಚಾಗುತ್ತಿದ್ದು, ನಿನ್ನೆ 25 ಜನರನ್ನು ಕೋವಿಡ್ ಬಲಿ ತೆಗೆದುಕೊಂಡಿತ್ತು.
ಕೋವಿಡ್‌ನಿಂದ ಸಾವನ್ನಪ್ಪುತ್ತಿರುವ ಜನರಲ್ಲಿ 50 ವರ್ಷ ಮೇಲ್ಪಟ್ಟವರೇ ಹೆಚ್ಚಿದ್ದಾರೆ. 70 ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ 34% ಇದ್ದು, 60 ರಿಂದ 69 ವರ್ಷದವರ ಮರಣ ಪ್ರಮಾಣ 27%, 50-59 ವರ್ಷದವರ ಮರಣ ಪ್ರಮಾಣ 21%, 40 ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ 11%, ಮೂವತ್ತು ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ 5% ರಷ್ಟಿದೆ.
ಸದ್ಯ ಲಸಿಕೆ ವಿತರಣೆ ಕೂಡಾ 45 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿದ್ದು, ಹೆಚ್ಚು ಕೋವಿಡ್ ಪ್ರಕರಣ ಕಂಡುಬರುವ ಪ್ರದೇಶಗಳಲ್ಲಿ ತೀವ್ರವಾಗಿ ಬಿಬಿಎಂಪಿ ವ್ಯಾಕ್ಸಿನೇಷನ್ ಡ್ರೈವ್ ನಡೆಸುತ್ತಿದೆ. ಆಶಾ ಕಾರ್ಯಕರ್ತೆಯರ ಮೂಲಕ ವಯಸ್ಕರನ್ನು ಪ್ರಾಥಮಿಕ ಹೆಲ್ತ್ ಸೆಂಟರ್ಗಳಿಗೆ ಕರೆತಂದು ಲಸಿಕೆ ನೀಡಲಾಗ್ತಿದೆ. ಇನ್ನು ಅಪಾರ್ಟ್ಮೆಂಟ್ಗಳಲ್ಲೂ ಖಾಸಗಿ ಆಸ್ಪತ್ರೆಗಳು ಆರೋಗ್ಯ ಉಪಕೇಂದ್ರ ತೆರದು ವ್ಯಾಕ್ಸಿನ್ ನೀಡುತ್ತಿದೆ.
ಒಟ್ಟಿನಲ್ಲಿ ಜನರು ಹೆಚ್ಚು ಹೆಚ್ಚು ವ್ಯಾಕ್ಸಿನ್ ತೆಗೆದುಕೊಳ್ಳಲು ಪಾಲಿಕೆ ಜನಜಾಗೃತಿ ಮೂಡಿಸುತ್ತಿದ್ದು, ವ್ಯಾಕ್ಸಿನ್ ಪಡೆದುಕೊಂಡವರಿಗೆ ಕೋವಿಡ್ ವಿರುದ್ಧ ಹೆಚ್ಚು ರಕ್ಷಣೆ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.