ಬೆಂಗಳೂರು : ಕೊರೊನಾ ವಾರಿಯರ್ಸ್ಗೆ ಈಗಾಗಲೇ ಘೋಷಿಸಿರುವ 30 ಲಕ್ಷ ರೂಪಾಯಿ ಪರಿಹಾರಕ್ಕಿಂತ ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದ್ದ ಸರ್ಕಾರ, ಇಂದು ತನ್ನ ನಿಲುವಿಗೆ ಕಾರಣಗಳನ್ನು ನೀಡಿದೆ.
ಈ ಕುರಿತು ಹಣಕಾಸು ಇಲಾಖೆ ಕಾರ್ಯದರ್ಶಿ ಪಿ ಸಿ ಜಾಫರ್ ಅವರು, ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಸರ್ಕಾರ ತನ್ನ ಲಿಖಿತ ಹೇಳಿಕೆಯಲ್ಲಿ ಕೇಂದ್ರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 50 ಲಕ್ಷ ರೂಪಾಯಿ ಪರಿಹಾರವನ್ನು ವಿಮೆ ಮೂಲಕ ಘೋಷಿಸಿದೆ. ಆದರೆ, ರಾಜ್ಯದ ಪರಿಹಾರ ಯೋಜನೆ ವಿಮೆ ಮಾದರಿಯದ್ದಲ್ಲ, ಬದಲಿಗೆ ಪರಿಹಾರದ ಹಣವನ್ನು ನೇರವಾಗಿ ರಾಜ್ಯ ಸರ್ಕಾರವೇ ಸಂತ್ರಸ್ತರಿಗೆ ನೀಡಲಿದೆ.
ಕೇಂದ್ರದ ವಿಮೆ ಯೋಜನೆ ನೇರವಾಗಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವವರಿಗೆ ಮಾತ್ರ ಅನ್ವಯಿಸುತ್ತದೆ. ಆದರೆ, ರಾಜ್ಯದ ಯೋಜನೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಸಿಬ್ಬಂದಿ, ಹೋಮ್ ಗಾರ್ಡ್, ನಾಗರಿಕ ರಕ್ಷಣಾ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಆಗ್ನಿ ಶಾಮಕ ಸಿಬ್ಬಂದಿ, ಕಾರಾಗೃಹದ ಸಿಬ್ಬಂದಿ, ಪೌರಕಾರ್ಮಿಕರೆಲ್ಲರೂ ಸೇರುತ್ತಾರೆ.
ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ 30 ಲಕ್ಷ ರೂ. ಪರಿಹಾರವನ್ನು ₹50 ಲಕ್ಷಕ್ಕೆ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ವಿವರಿಸಿದ್ದಾರೆ. ಹೇಳಿಕೆ ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಈ ವಿಚಾರವನ್ನು ಮೆರಿಟ್ಸ್ ಆಧಾರದಲ್ಲಿ ಪರಿಗಣಿಸಲಿದೆ ಎಂದು ಸ್ಪಷ್ಟಪಡಿಸಿದೆ.