ಬೆಂಗಳೂರು: ರಾಜ್ಯದ ವಿವಿಧೆಡೆ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕಳೆದ ಮೂರು ನಾಲ್ಕು ದಿನಗಳಿಂದ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಮಳೆಯಾಗುತ್ತಿದೆ. ಹಾಗಾಗಿ, ಆಂಧ್ರಕ್ಕೆ ಹೊಂದಿಕೊಂಡಿರುವ ನಮ್ಮ ಜಿಲ್ಲೆಗಳಲ್ಲೂ ಮಳೆಯಾಗುತ್ತಿದೆ. ಕೊಪ್ಪಳ, ಬೀದರ್, ಕಲಬುರ್ಗಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಕೊಪ್ಪಳದಲ್ಲಿ ಶೇ. 352 ರಷ್ಟು ಮಳೆ ಜಾಸ್ತಿ ಆಗಿದೆ. ಕಲಬುರ್ಗಿಯಲ್ಲಿ ಶೇ 704ರಷ್ಟು ಮಳೆ ಹೆಚ್ಚು ಆಗುತ್ತಿದೆ. ಬೀದರ್ನಲ್ಲಿ 694 ಪರ್ಸೆಂಟ್ ಮಳೆ ಜಾಸ್ತಿಯಾಗಿದೆ. ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. 19 ರೈತರನ್ನು ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದೇವೆ. ತೆಲಂಗಾಣದಿಂದ ಕಾರಂಜಾ ಡ್ಯಾಮ್ಗೆ ನೀರು ಬರುತ್ತಿದೆ. ಇದರಿಂದ ಅಲ್ಲಿ ಹೆಚ್ಚು ಪ್ರವಾಹವಾಗುತ್ತಿದೆ. ಇದುವರೆಗೂ ಒಬ್ಬರು ಮೃತಪಟ್ಟಿದ್ದು, 517 ಪ್ರಾಣಿಗಳು ಸತ್ತಿವೆ. 2712 ಮನೆ ಹಾನಿಯಾಗಿದೆ. 318 ಪೂರ್ಣ ಡ್ಯಾಮೇಜ್ ಆಗಿದೆ. ಬೆಳೆ ಹಾನಿ ಕುರಿತು ವರದಿ ಕೊಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದು ಹೇಳಿದರು.
ಈಗಾಗಲೇ ಹಲವು ಕ್ರಮ ಕೈಗೊಂಡಿದ್ದು, 43 ರಿಲೀಫ್ ಕ್ಯಾಂಪ್ಗಳನ್ನು ತೆರೆದಿದ್ದೇವೆ. 4,864 ರಿಲೀಫ್ ಕೇಂದ್ರಗಳಲ್ಲಿ ಜನರು ಇದ್ದಾರೆ. ಅವರಿಗೆ ಸೂಕ್ತ ಸೌಕರ್ಯ ಒದಗಿಸಲು ಸೂಚನೆ ಕೊಡಲಾಗಿದೆ ಎಂದು ಹೇಳಿದರು.
ನಾಳೆ ಪ್ರವಾಸ: ಮಳೆಯಿಂದ ಆಗಿರುವ ನಷ್ಟದ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೊಡ್ತಿದ್ದೇವೆ ನಾಳೆ ಕಲಬುರ್ಗಿ, ಯಾದಗಿರಿಯಲ್ಲಿ ಪ್ರವಾಸ ಕೈಗೊಳ್ತಿದ್ದೇನೆ. ಮಳೆಯಿಂದಾಗಿರುವ ಅನಾಹುತಗಳ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಜೊತೆಗೆ ಅದಕ್ಕೆ ಬೇಕಾಗುವ ಹಣ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.
ನಾಳೆ ಸಿಎಂ ವಿಡಿಯೋ ಸಂವಾದ: ನಾಳೆ ಮುಖ್ಯಮಂತ್ರಿಗಳು ಕೂಡ ಆಯಾ ಜಿಲ್ಲಾಧಿಕಾರಿಗಳ ಜೊತೆ ಮಳೆ ಅನಾಹುತದ ಬಗ್ಗೆ ವೀಡಿಯೋ ಕಾನ್ಪೆರೆನ್ಸ್ ಮಾಡುತ್ತಿದ್ದಾರೆ. ಕಲಬುರ್ಗಿಯಲ್ಲಿ ಹೆಚ್ಚು ಮಳೆಯಾಗಿದೆ. ಹೀಗಾಗಿ ನಾಳೆ ಕಲಬುರ್ಗಿಗೆ ಪ್ರವಾಸ ಮಾಡುತ್ತೇನೆ. ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದರು.
ಸರ್ಕಾರ ಜಿಲ್ಲಾಧಿಕಾರಿಗಳ ಅಕೌಂಟ್ನಲ್ಲಿ ಹಣ ಇಟ್ಟಿದೆ:
ಸುಮಾರು 800 ಕೋಟಿ ರೂ.ಗೂ ಹೆಚ್ಚು ಹಣ ಅಕೌಂಟ್ನಲ್ಲಿ ಇಟ್ಟಿದೆ. ಎಲ್ಲೂ ಕೂಡ ಹಣದ ಕೊರತೆ ಇಲ್ಲ. ಅಗತ್ಯ ಕ್ರಮಗಳಿಗಾಗಿ ಹಣ ಒದಗಿಸಲು ಕ್ರಮ ವಹಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು. ಈಗಾಗಕೇ ಕೇಂದ್ರ ಸರ್ಕಾರ 6 ಎನ್ಡಿಆರ್ಎಫ್ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ ಎಂದ ಸಚಿವರು, ಪ್ರವಾಹದ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ನಿರಾಶ್ರಿತರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.