ಬೆಂಗಳೂರು: ನಗರದಲ್ಲಿ ಹೆಚ್ಚೆಚ್ಚು ಕೋವಿಡ್ ಸೋಂಕು ಪರೀಕ್ಷೆ ನಡೆಯುತ್ತಿದೆ. ನಿನ್ನೆ 40 ಸಾವಿರ ಜನರ ಟೆಸ್ಟ್ ನಡೆದಿದೆ. ಹೆಚ್ಚು ಟೆಸ್ಟ್ ಆದಷ್ಟು, ಪಾಸಿಟಿವ್ ಸಂಖ್ಯೆ ಪತ್ತೆಯಾಗುತ್ತಿದೆ. ಅಲ್ಲದೇ ಮುಂಬೈ ಹಾಗೂ ದೆಹಲಿಗೆ ಹೋಲಿಸಿದ್ರೆ ಮರಣ ಪ್ರಮಾಣ ಬೆಂಗಳೂರಿನಲ್ಲಿ ಕಡೆ ಇದೆ. ಸದ್ಯ ಕೋವಿಡ್ ರೋಗಿಗಳ ಮರಣ ಪ್ರಮಾಣ ಶೇಕಡ 1.23 ಇದ್ದು, ಶೇ. 1ಕ್ಕೆ ಇಳಿಕೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ನಗರದಲ್ಲಿ ಕೋವಿಡ್ ಟೆಸ್ಟ್ ಇನ್ನಷ್ಟು ಹೆಚ್ಚಳ ಮಾಡಿ, ಸಾವಿನ ಪ್ರಮಾಣ ಹಾಗೂ ನಿಧಾನಕ್ಕೆ ಪಾಸಿಟಿವ್ ಪ್ರಮಾಣ ಇಳಿಕೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಕೆಲಸ ಮಾಡುತ್ತಿದೆ ಎಂದು ಆಯುಕ್ತರಾದ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.ತಿಳಿಸಿದ್ದಾರೆ.
ಹೊರ ಜಿಲ್ಲೆಗಳಿಂದ ಬರುವ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಳ
ಬೇರೆ ಜಿಲ್ಲೆಗಳಿಂದ ಅನೇಕ ಕೋವಿಡ್ ಪಾಸಿಟಿವ್ ರೋಗಿಗಳನ್ನು ನಗರದ ಆಸ್ಪತ್ರೆಗಳಿಗೆ ಕಳಿಸಿಕೊಡಲಾಗುತ್ತದೆ. ಕಳೆದ ವಾರ ಒಟ್ಟು 350 ಪಾಸಿಟಿವ್ ರೋಗಿಗಳನ್ನು ಕಳಿಸಲಾಗಿತ್ತು. ಬೇರೆ ಜಿಲ್ಲೆಗಳಿದ ಬಂದಾಗ ಅಲ್ಲಿನ ಜಿಲ್ಲಾಧಿಕಾರಿಗಳು ಮೊದಲೇ ಗಮನಕ್ಕೆ ತಂದರೆ ಬೆಡ್ ವ್ಯವಸ್ಥೆ ಮಾಡಲಾಗುವುದು. ಆದರೆ ಕೆಲವು ಸಂದರ್ಭದಲ್ಲಿ ಗಮನಕ್ಕೆ ತಾರದೆ ಬಂದರೆ ಆಂಬುಲೆನ್ಸ್ನಲ್ಲಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಸ್ಥಿತಿ ಬರುತ್ತಿದೆ. ಹೀಗಾಗಿ ಹೊರ ಜಿಲ್ಲೆಯ ಕೊರೊನಾ ರೋಗಿಗಳ ನಿರ್ವಹಣೆ ಬಗ್ಗೆ ಸರಿಯಾದ ಕ್ರಮ ಅನುಸರಿಸಲು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಆಸ್ಪತ್ರೆ ಚಿಕಿತ್ಸೆ ಹತ್ತು ದಿನದಿಂದ ಏಳು ದಿನಕ್ಕೆ ಇಳಿಕೆ
ಕೆಲವು ಸಂದರ್ಭದಲ್ಲಿ ಸೋಂಕಿನ ಲಕ್ಷಣ ಇಲ್ಲದ, ಕಡಿಮೆ ರೋಗ ಲಕ್ಷಣ ಇರುವವರು ಕೂಡಾ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇವರಿಗೆ ಆಸ್ಪತ್ರೆ ಅಗತ್ಯ ಇರುವುದಿಲ್ಲ. ಈಗಿರುವ ನಿಯಮ ಪ್ರಕಾರ ಹತ್ತು ದಿನ ಕೋವಿಡ್ ರೋಗಿ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಆದರೆ ಎಸಿಮ್ಟಮ್ಯಾಟಿಕ್ ಅವರಿಗೆ 7 ದಿನಕ್ಕೆ ಈ ನಿಯಮ ಕಡಿಮೆಗೊಳಿಸುವಂತೆ ಕೇಳಲಾಗಿದೆ ಎಂದರು.
ಕೋವಿಡ್ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಐಸೋಲೇಟ್ ಆಗಬೇಕು. ಅಕ್ಕ ಪಕ್ಕದ ಮನೆಯವರ ಗಮನಕ್ಕೂ ತರಲಾಗುವುದು. ಒಂದು ವೇಳೆ ಐಸೋಲೇಟ್ ಆಗದೆ ಹೊರಗೆ ಓಡಾಡಿದರೆ ಪೊಲೀಸರಿಗೆ ಮಾಹಿತಿ ಹೋಗಿ ಎಫ್ ಐಆರ್ ದಾಖಲಾಗಲಿದೆ ಎಂದರು. ಐದು ದಿನ ಕ್ವಾರಂಟೈನ್ ಆಗಿ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದರೆ ಹೊರಬರಬಹುದು ಎಂದರು. ಕೆಲವೆಡೆ ಕೋವಿಡ್ ಕೇರ್ ಸೆಟರ್ ಗೆ ಬೇಡಿಕೆ ಕೇಳಿ ಬರುತ್ತಿದ್ದು, ಅಗತ್ಯ ಇರುವ ಕಡೆ ಹೆಚ್ಚು ಮಾಡಲಾಗುವುದು ಎಂದು ತಿಳಿಸಿದರು.
ಕೆಲವು ಪ್ರಕರಣಗಳಲ್ಲಿ ಕೋವಿಡ್ ಒಮ್ಮೆ ಬಂದವರಿಗೆ ಮತ್ತೆ ಕೋವಿಡ್ ಸೋಂಕು ದೃಢಪಟ್ಟ ಘಟನೆಗಳು ನಡೆದಿವೆ. ಇವುಗಳನ್ನು ಅಧ್ಯಯನ ಮಾಡಲು, ತಜ್ಞರ ಸಮಿತಿ ಮಾಡಲಾಗಿದ್ದು, ಅಧ್ಯಯನ ನಡೆಯುತ್ತಿದೆ ಎಂದರು. ಒಂದು ಬಾರಿ ಕೋವಿಡ್ ಸೋಂಕು ಬಂದ ನಂತರ 17 ದಿನ ಕ್ವಾರಂಟೈನ್ ನಲ್ಲಿರಬೇಕು. ನಂತರವೂ ರೋಗ ಲಕ್ಷಣ ಬಂದರೆ ಟೆಸ್ಟ್ ಮಾಡಿಸಬೇಕಿದೆ ಎಂದರು.
ಹೆಚ್ಚುವರಿ ಸಿಬ್ಬಂದಿ ನೇಮಕ
ಆಸ್ಪತ್ರೆಗಳ ಹಾಸಿಗೆ ಲಭ್ಯತೆ ಬಗ್ಗೆ ಪರೀಕ್ಷಿಸಲು ಎಂಟು ತಂಡಗಳನ್ನು ಮಾಡಿ, ಪ್ರತೀ ತಂಡದಲ್ಲಿ ಮೂವರು ವೈದ್ಯರನ್ನು ನೇಮಿಸಲಾಗಿದೆ. 64 ಆಸ್ಪತ್ರೆಗಳನ್ನು ಈಗಾಗಲೇ ಪರಿಶೀಲಿಸಿದ್ದಾರೆ. 380 ಆಸ್ಪತ್ರೆಗಳನ್ನೂ ಭೇಟಿ ಮಾಡಲು ಇನ್ನೂ ಹತ್ತು ಹೆಚ್ಚುವರಿ ತಂಡ ಮಾಡಲಾಗುವುದು. ಡೆತ್ ಆಡಿಟ್ ರಿಪೋರ್ಟ್ ಪ್ರಕಾರ , ಹೋಂ ಐಸೋಲೇಷನ್ ನಲ್ಲಿರುವ ರೋಗಿಗಳನ್ನು ಪರೀಕ್ಷಿಸಿ ಹೆಚ್ಚಿನ ಸೋಂಕಿನ ಲಕ್ಷಣ ಇದ್ದರೆ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಇದರಿಂದ ಸಾವಿನ ಪ್ರಮಾಣ ಕಡಿಮೆ ಮಾಡಬಹುದಾಗಿದೆ. ಹೆಲ್ತ್ ಕೇರ್ ಸರ್ವಿಸ್ ಪ್ರೊವೈಡರ್ ತಂಡದಿಂದ ಪ್ರತೀ ದಿನ ಹೋಂ ಐಸೋಲೇಷನ್ ನಲ್ಲಿರುವವರಿಗೆ ಕರೆ ಹೋಗುತ್ತದೆ. ಪಾಸಿಟಿವ್ ರೋಗಿಗಳನ್ನು ಪ್ರತಿದಿನ ಗಮನಿಸಲಾಗುವುದು ಎಂದರು.