ಬೆಂಗಳೂರು : ನಗರದ ಪುರಪಿತೃಗಳ ಐದು ವರ್ಷದ ಅಧಿಕಾರ ಅವಧಿ ನಾಳೆಗೆ ಕೊನೆಗೊಳ್ಳಲಿದೆ. ಇಂದು ಕೊನೆಯ ಕೌನ್ಸಿಲ್ ಸಭೆ ನಡೆದಿದ್ದು, ಕೆಲ ಅಭಿವೃದ್ಧಿ ಚರ್ಚೆಗಳ ಜೊತೆಗೆ ಪರಸ್ಪರ ಅಭಿನಂದನೆ, ಶುಭಾಶಯ ಕೃತಜ್ಞತೆ ತೋರುವ ಮೂಲಕ ಸಭೆಯನ್ನು ಮುಕ್ತಾಯಗೊಳಿಸಿದರು.
ಕವನ ವಾಚನ, ಪರಸ್ಪರ ಪಕ್ಷಗಳ ಸದಸ್ಯರ ಕಾಲೆಳೆಯುವ ಮೂಲಕ ಸಭೆ ಒಮ್ಮೊಮ್ಮೆ ನಗೆಗಡಲಲ್ಲಿ ತೇಲಿತು. ಇಂದು ಬೆಳಗ್ಗೆ ಪಾಲಿಕೆ ಸದಸ್ಯರ ಫೋಟೋ ಸೆಷನ್ ಕೂಡ ನಡೆಯಿತು. ಇದರ ಬೆನ್ನಲ್ಲೆ ಮಳೆ ಬಂದು ನಗರದ ಅಪಾರ ಮನೆಗಳಿಗೆ ನೀರು ನುಗ್ಗಿ ಹಾನಿಗೀಡಾಗಿದ್ದರೂ ತಲೆಕೆಡಿಸಿಕೊಳ್ಳದ ಕಾರ್ಪೋರೇಟರ್ಸ್ಗಳು ಫೋಟೋ ಸೆಷನ್ ನಡೆಸಿದ್ದಾರೆ ಎಂಬ ಟೀಕೆಗಳು ಸಹ ಕೇಳಿಬಂದವು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಗೌತಮ್ ಕುಮಾರ್, ನಿನ್ನೆ ರಾತ್ರಿಯಿಂದಲೇ ಮಳೆಯಿಂದಾದ ಹಾನಿ ಸರಿಪಡಿಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಸ್ಥಳದಲ್ಲಿದ್ದಾರೆ, ಕೆಲವು ಪಾಲಿಕೆ ಸದಸ್ಯರು ಸಭೆಗೆ ಬಾರದೇ ವಾರ್ಡ್ ಕೆಲಸದಲ್ಲಿದ್ದಾರೆ ಎಂದು ಸಮಜಾಯಿಷಿ ನೀಡಿದರು.
ಈ ಮಧ್ಯೆ ಯಮಲೂರು ವಾರ್ಡ್ನಲ್ಲಿ ಎರಡು ಸೈಟ್ಗಳಿಗೆ ಅಕ್ರಮವಾಗಿ ಖಾತಾ ಮಾಡಿಸಿಕೊಟ್ಟಿರುವ ಬಗ್ಗೆ ಪಾಲಿಕೆ ಸದಸ್ಯ ಹಾಗೂ ವಾರ್ಡ್ ಕಮಿಟಿ ಸದಸ್ಯ ರಮೇಶ್ ರೆಡ್ಡಿ ಸಭೆ ಗಮನಕ್ಕೆ ತಂದರು. ಬಂಗಲೆಗಳಿದ್ದರೂ ಖಾಲಿ ಸೈಟ್ ಎಂದು ಬರೆದು, ರಸ್ತೆ ಜಾಗವನ್ನೂ ಸೇರಿಸಿ ಖಾತಾ ಮಾಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಸಂಜೆಯೊಳಗೆ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು.
ಮಾಜಿ ಮೇಯರ್ ಪದ್ಮಾವತಿ ಮಾತನಾಡಿ, ಇತ್ತೀಚೆಗೆ ಸಭೆಯಲ್ಲಿ ಯಾವುದೇ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಅಧಿಕಾರಿಗಳು, ಆಯುಕ್ತರು ಕೊನೆ ಸಭೆಗೆ ಗೈರಾಗಿರುವ ಬಗ್ಗೆಯೂ ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯ ಡಾ.ರಾಜು ಮಾತನಾಡಿ, ಕಸ ವಿಲೇವಾರಿ, ಬೀದಿನಾಯಿ ಹಾವಳಿ, ನೀರಿನ ಸಮಸ್ಯೆ ನಗರದಲ್ಲಿ ಕಾಡುತ್ತಿದ್ದು, ಇದಕ್ಕೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಅನೇಕ ಕಲ್ಯಾಣ ಕಾರ್ಯಕ್ರಮಗಳೂ ಜಾರಿಯಾಗದೆ, ಅವಧಿ ಮುಗಿಸುತ್ತಿದ್ದೇವೆ. ಅಂಗಡಿ ಬಂದ್ ಆದ ಮೇಲೆ, ನಾಳೆ ಬನ್ನಿ ಎಂಬ ಬೋರ್ಡ್ ಹಾಕುವ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ವಿಷಾಧ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಚುನಾವಣೆ ನಡೆಸದಿರುವ ಬಗ್ಗೆ ಅಸಮಾಧಾನ, ಹಲವು ಕಾಮಗಾರಿಗಳು ಬಾಕಿ ಉಳಿದಿರುವ ಬಗ್ಗೆ ದೂರುಗಳು ಸೇರಿದಂತೆ ಪರಸ್ಪರ ಶುಭ ಕೋರುವ ಬಗ್ಗೆ ಸಭೆ ಮುಕ್ತಾಯಗೊಳಿಸಿದರು.